– ಗುಜರಾತ್ ಗಡಿ ಪ್ರದೇಶದಲ್ಲಿ ಬಿಎಸ್ಎಫ್ ಯೋಧರ ವಶಕ್ಕೆ ಪ್ರೇಮಿ
ನವದೆಹಲಿ: ಪಾಕಿಸ್ತಾನದಲ್ಲಿದ್ದ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಗುಜರಾತ್ ಬಳಿಯ ಗಡಿ ಪ್ರದೇಶವನ್ನು ದಾಟಲು ಯತ್ನಿಸುತ್ತಿದ್ದ 20 ವರ್ಷದ ಯುವಕನನ್ನು ಬಿಎಸ್ಎಫ್ ಯೋಧರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಪಟ್ಟಣದ ನಿವಾಸಿಯಾಗಿರುವ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದ ಜಿಷಾನ್ ಮಹ್ಮದ್ ಸಿದ್ಧಿಕಿ ಎಂದು ಈ ಸಾಹಸಕ್ಕೆ ಕೈ ಹಾಕಿದ್ದ. ಗುರುವಾರ ರಾತ್ರಿ ರಾಣ್ ಅಫ್ ಕಚ್ ಬಳಿಕ ತೆರಳಿದ್ದ ಆತ ಬೈಕ್ ಸಹಾಯದಿಂದ ಗಡಿ ದಾಟಲು ಯತ್ನಿಸಿದ್ದ. ಇದನ್ನು ಗಮನಿಸಿದ್ದ ಯೋಧರು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು ಎಂದು ಎಸ್ಪಿ ರಾಜ್ತಿಲಾಕ್ ರೋಷನ್ ತಿಳಿಸಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣದ ಮೂಲಕ ಪಾಕ್ನ ಕರಾಚಿ ಮೂಲಕದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಸಿದ್ಧಿಕಿ ಗಂಟೆಗಟ್ಟಲೇ ಚಾಟ್ ಮಾಡುತ್ತಿದ್ದ. ಕೆಲ ಸಮಯದ ಬಳಿಕ ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಪರಿಣಾಮ ಪ್ರೇಯಸಿಯನ್ನು ನೋಡಲು ಆತ ನಿರ್ಧರಿಸಿದ್ದ. ಇದಕ್ಕಾಗಿ ಗೂಗಲ್ ಮ್ಯಾಪ್ ಬಳಿಸಿಕೊಂಡು ಗಡಿ ಬಳಿ ಬೈಕ್ನಲ್ಲಿ ತೆರಳಿದ್ದ. ಅಲ್ಲಿ ಆತ ಬಂದಿದ್ದ ಬೈಕ್ ಮರಳಿನಲ್ಲಿ ಸಿಕ್ಕಿ ಹಾಕಿಕೊಂಡ ಪರಿಣಾಮ ಕಾಲ್ನಡಿಗೆ ಮೂಲಕ ಮುಂದೇ ಸಾಗುತ್ತಿದ್ದ ವೇಳೆ ಯೋಧರು ಆತನನ್ನು ಗಮನಿಸಿ ವಶಕ್ಕೆ ಪಡೆದಿದ್ದರು.
Advertisement
ಜುಲೈ 11 ರಂದು ಸಿದ್ಧಿಕಿ ಪ್ರೇಯಸಿಯನ್ನು ಭೇಟಿ ಮಾಡಲು ಮನೆ ಬಿಟ್ಟು ತೆರಳಿದ್ದ. ಮೊದಲು ಉಸ್ಮಾನಾಬಾದ್ ನಿಂದ ಅಹ್ಮದ್ನಗರಕ್ಕೆ 225 ಕಿಮೀ ಸೈಕಲ್ ಮೂಲಕ ಪ್ರಯಾಣಿಸಿದ್ದ. ಆ ಬಳಿಕ ಬೈಕ್ನಲ್ಲಿ 1 ಸಾವಿರ ಕಿಮೀ ಪ್ರಯಾಣಿಸಿ ಗಡಿ ಪ್ರದೇಶ ಸೇರಿದ್ದ. ಇತ್ತ ಪುತ್ರ ಕಾಣೆಯಾಗಿದ್ದ ಕಾರಣ ಸಿದ್ಧಿಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
Advertisement
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಆತನ ಲ್ಯಾಪ್ಟಾಪ್ ಪರಿಶೀಲಿಸಿದ ಪೊಲೀಸರಿಗೆ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದ ವಿಚಾರ ಖಚಿತವಾಗಿತ್ತು. ಯುವತಿಯನ್ನು ಭೇಟಿ ಮಾಡಲು ಈತ ಮನೆ ಬಿಟ್ಟು ತೆರಳಿದ್ದನ್ನು ತಿಳಿದಿದ್ದ ಪೊಲೀಸರು ಈತನ ಮಾಹಿತಿಯನ್ನು ಗುಜರಾತ್ ಪೊಲೀಸರು ಹಾಗೂ ಬಿಎಸ್ಎಫ್ಗೆ ನೀಡಿದ್ದರು. ಭಾರತ ಮತ್ತು ಪಾಕ್ ಗಡಿ ಪ್ರದೇಶದ 1.5 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಹೆಚ್ಚು ಸಮಯ ಪ್ರಯಾಣಿಸಿದ್ದ ಕಾರಣ ಸಿದ್ದಿಕಿ ಸುಮಾರು 2 ಗಂಟೆಗಳ ಕಾಲ ಪ್ರಜ್ಞೆ ತಪ್ಪಿ ಬಿದ್ದಿದ್ದ. ಬಳಿಕ ಎಚ್ಚರಗೊಂಡಾಗ ಕರಾಚಿ ಮೂಲಕ ಯುವತಿಯನ್ನು ಪ್ರೀತಿ ಮಾಡುತ್ತಿದ್ದಾಗಿ ಯೋಧರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.