ಚಿಕ್ಕೋಡಿ/ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ಹೀರಣ್ಯಕೇಶಿ, ದೂದಗಂಗಾ, ವೇದಗಂಗಾ ನದಿ ತೀರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಂಕಷ್ಟದಲ್ಲಿರುವ ಸಂತ್ರಸ್ತರ ನೆರವಿಗೆ ಬರುವುದು ಬಿಟ್ಟು ಬಹುತೇಕ ರಾಜಕಾರಣಿಗಳು ಸಚಿವ ಸ್ಥಾನದ ಲಾಬಿಯಲ್ಲಿ ಬ್ಯೂಸಿಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಧ್ವನಿಯಾಗಬೇಕಿದ್ದ ಸಂಸದರು ಸೇರಿದಂತೆ ಬಹುತೇಕ ಶಾಸಕರು ಸಂತ್ರಸ್ತರನ್ನ ಮರೆತಿದ್ದು, ಬೆಂಗಳೂರಲ್ಲಿ ಬೀಡು ಬಿಟ್ಟಿದ್ದಾರೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರವಾಹ ಬಂದಾಗಿನಿಂದಲೂ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಮಾಜಿ ಸಚಿವೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ತನ್ನ ಕ್ಷೇತ್ರದ 21 ಗ್ರಾಮಗಳು ಜಲಾವೃತಗೊಂಡರೂ ಈ ವರೆಗೆ ಸಂತ್ರಸ್ತರು ಹೇಗಿದ್ದಾರೆ ಎಂದು ನೋಡಿಲ್ಲ. ಹೀಗಾಗಿ ನಿಪ್ಪಾಣಿ ಶಾಸಕಿ ಕಾಣೆಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಒಂದು ಬಾರಿ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ತಮ್ಮ ಕ್ಷೇತ್ರದಲ್ಲಿ ಪ್ರವಾಹ ತಾಂಡವಾಡುತ್ತಿದ್ದರೂ ಸಚಿವ ಸ್ಥಾನದ ಲಾಬಿಗಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
Advertisement
Advertisement
ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರ ಕ್ಷೇತ್ರದ 4 ಗ್ರಾಮಗಳು ಜಲಾವೃತವಾಗಿದ್ದು, ಶಾಸಕರು ಒಮ್ಮೆ ಭೇಟಿ ನೀಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಯವರ ಕ್ಷೇತ್ರದ 14 ಗ್ರಾಮಗಳು ಜಲಾವೃತಗೊಂಡಿವೆ. ಆದರೂ ಶಾಸಕರು ಬೆಂಗಳೂರಿಗೆ ಹೋಗುವ ತರಾತರುರಿಯಲ್ಲಿ ಒಮ್ಮೆ ಭೀರಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಸಂತ್ರಸ್ಥರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಕ್ಷೇತ್ತದಲ್ಲೇ ಇದ್ದಾರೆ.
Advertisement
ಪ್ರಮುಖವಾಗಿ ಅಥಣಿ ಕ್ಷೇತ್ರ ಪ್ರವಾಹ ಪೀಡಿತವಾಗಿದ್ದು, ಅಲ್ಲಿನ 22 ಗ್ರಾಮಗಳಿಗೆ ಕೃಷ್ಣೆಯ ನೀರು ನುಗ್ಗಿದೆ. ಆದರೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಒಂದು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಸಚಿವ ಸ್ಥಾನದ ಲಾಬಿಗಾಗಿ ಬೆಂಗಳೂರಿಗೆ ತೆರಳಿದ್ದಾರೆ.
Advertisement
ಈ ಪೈಕಿ ಕೆಲ ಶಾಸಕರು ಕ್ಷೇತ್ರದಲ್ಲಿದ್ದು ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಕಾಗವಾಡ ಕ್ಷೇತ್ರದ 7 ಗ್ರಾಮಗಳು ಜಲಾವೃತವಾಗಿದ್ದು, ಪ್ರತಿ ಗ್ರಾಮಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಸೇರಿದಂತೆ ವಿವಿಧ ವಸ್ತುಗಳನ್ನು ನೀಡಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದು, ಚಿಕ್ಕೋಡಿ ತಾಲೂಕಿನ 11 ಗ್ರಾಮಗಳ ಸಂತ್ರಸ್ತರಿಗೆ ಬೋಟ್ ವ್ಯವಸ್ಥೆ, ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.
ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಎರಡು ಬಾರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹೀರಣ್ಯಕೇಶಿ ನದಿ ತೀರದಲ್ಲಿ ಪ್ರವಾಹ ಕಡಿಮೆಯಾದ ನಂತರ ದೆಹಲಿಗೆ ಪ್ರಯಾಣ ಬೆಳೆಸಿ, ಸದ್ಯ ಕ್ಷೇತ್ರದಲ್ಲಿದ್ದಾರೆ. ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಯೋಗದ ಜೊತೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಆಸರೆಯಾಗಬೇಕಿದ್ದ ಬಹುತೇಕ ಶಾಸಕರು ಸಚಿವ ಸ್ಥಾನದ ಲಾಬಿಯಲ್ಲಿ ಬ್ಯೂಸಿಯಾಗಿದ್ದಾರೆ. ಮತ್ತೊಂದು ಕಡೆ ಒಂಟಿ ಸರ್ಕಾರದಲ್ಲಿ ಸಚಿವರಿಲ್ಲದ ಕಾರಣ ಅಧಿಕಾರಿಗಳು ಆಡಿದ್ದೆ ಆಟವಾಗಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಗೋಳು ಕೇಳವರ್ಯಾ ಎನ್ನುವಂತಾಗಿದೆ.