ಮಡಿಕೇರಿ: ಕೊಡಗು ಜಿಲ್ಲೆಯ ಮೇಲೆ ಅದ್ಯಾಕೋ ಪ್ರಕೃತಿಯ ಮುನಿಸು ಕಡಿಮೆಯಾದಂತಿಲ್ಲ. ಮಳೆಗಾಲದಲ್ಲಂತೂ ಅಲ್ಲಿನ ಜನರ ಪರಿಸ್ಥಿತಿ ಹೇಳತೀರದಾಗಿದೆ. ಈ ನಡುವೆ ಜಲಮಂಡಳಿ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ನದಿ ಪಾತ್ರದ ಜನ ಜೀವಭಯದಲ್ಲೇ ಬದುಕುವಂತಾಗಿದೆ.
ಜೀವನದಿ ಕಾವೇರಿಯ ಪ್ರವಾಹ ತಗ್ಗಿದರೂ ಕೊಡಗು ಜಿಲ್ಲೆಯ ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ ಸೋಮವಾರಪೇಟೆಯ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನದಿ ಪಾತ್ರದಲ್ಲಿ ಮಣ್ಣು ಕುಸಿಯುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಎಲ್ಲೆಲ್ಲೂ ಬಿರುಕು ಮೂಡುತ್ತಿದ್ದು, ಭೂಮಿ ಕುಸಿಯತೊಡಗಿದೆ.
Advertisement
Advertisement
ಕಳೆದ 3 ವರ್ಷಗಳಿಂದಲೂ ಸ್ಥಳೀಯರು ಪ್ರವಾಹದ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಒಳಚರಂಡಿಯ ಪೈಪ್ಲೈನ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿರುವುದು ಇದಕ್ಕೆಲ್ಲ ಕಾರಣವಂತೆ. ಪೈಪ್ಲೈನ್ ಅಳವಡಿಸಿರುವ ಜಾಗದಲ್ಲಿ ರಸ್ತೆಗಳಲ್ಲಿ ಗುಂಡಿ ಬೀಳುತ್ತಿದೆ. ಲಕ್ಷಾಂತರ ವೆಚ್ಚದಲ್ಲಿ ಮನೆ ಕಟ್ಟಿಕೊಂಡಿದ್ದರೂ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
Advertisement
ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುವೆಂಪು ಬಡಾವಣೆಯಲ್ಲಿ ಈ ಬಾರಿಯ ಪ್ರವಾಹಕ್ಕೆ ನಂಜುಂಡಸ್ವಾಮಿ ಎಂಬವರ ಮನೆಯ ಗೋಡೆ ಕುಸಿದುಬಿದ್ದಿದೆ. ಇದೇ ರೀತಿ ಅನೇಕ ಮನೆಗಳ ಗೋಡೆಗಳು ಶಿಥಿಲಾವಸ್ಥೆಯಲ್ಲಿದೆ. ಇಷ್ಟೆಲ್ಲಾ ಆದರೂ ಜಿಲ್ಲಾಡಳಿತ ಮಾತ್ರ ಏನೂ ಆಗಿಲ್ಲವೆಂಬಂತೆ ಗಾಢ ನಿದ್ರೆಯಲ್ಲೇ ಇದೆ. ಮನೆ ಕಟ್ಟಿಕೊಂಡು ನೆಮ್ಮದಿಯ ಬದುಕು ಬದುಕಬೇಕು ಅಂದುಕೊಂಡಿದ್ದ ಜನ ಪ್ರವಾಹಕ್ಕೆ ಸಿಕ್ಕಿ ನಲುಗಿ ಹೋಗುತ್ತಿದ್ದಾರೆ. ಇತ್ತ ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.