– ಪರಿಹಾರ ಕಾರ್ಯಕ್ಕೆ ಹಣ ಕೊರತೆ ಇಲ್ಲ
– ನನ್ನ ವರದಿ ನೆಗೆಟಿವ್ ಬಂದಿದೆ
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಹದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
Advertisement
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ನಿನ್ನೆಯೇ 8 ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಕ್ರಮಕ್ಕೆ ನಿರ್ದೇಶನ ಕೊಡಲಾಗಿದೆ. ಗೃಹ ಇಲಾಖೆ ಜೊತೆಗೂ ಸಭೆ ಮಾಡಿದ್ದೇ. ಇಂದಿನ ಸಭೆಗೆ ಸಚಿವರಾದ ಸೋಮಣ್ಣ, ಸಿಟಿ ರವಿ ಅವರು ಭಾಗಿಯಾಗಿದ್ದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸೋಮಣ್ಣ ಅವರು ಜಿಲ್ಲೆಗೆ ಭೇಟಿ ನೀಡುತ್ತಾರೆ. ನಾನು ರಾಜ್ಯದ ಹಲವು ಭಾಗಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಹಣ ಕೊರತೆ ಇಲ್ಲ: ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕೊರೊನಾ ನಿಯಂತ್ರಣ ಸೇರಿದಂತೆ ಪ್ರವಾಹ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಹಣವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಸಿಎಂ ಕೂಡ ಸೂಚನೆ ನೀಡಿದ್ದಾರೆ. ಕೊರೊನಾ ಮತ್ತು ಪ್ರವಾಹ ನಿರ್ವಹಣೆಗೆ ಪ್ರತ್ಯೇಕ ಹಣ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಮೈಸೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಆಗಿದೆ. ಕೊಡಗಿನಲ್ಲಿ ಗುಡ್ಡ ಕುಸಿದು ಐವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.
Advertisement
ಮಳೆಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣದ 10 ಸಾವಿರ ರೂ. ನೀಡಲು ತಿಳಿಸಿದ್ದೇವೆ. ದನ, ಕರು, ಕುರಿ ಸತ್ತಿದ್ದರೆ ಕೂಡಲೇ ಪರಿಹಾರ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. 30 ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 1,268 ಕೋಟಿ ರೂ. ಹಣವಿದೆ. ಅಗತ್ಯ ಮುಂಜಾಗ್ರತಾ ಸಾಮಗ್ರಿ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನಡ ನೀಡಿದ್ದೇವೆ. ಕಳೆದ ಬಾರಿಯಂತೆ ಯಾವುದೇ ಅನಾಹುತ ಆಗಲು ಬಿಡುವುದಿಲ್ಲ. ಜಲಾಶಯಗಳಲ್ಲಿ ಅಗತ್ಯ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಉಳಿಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ನೆಗೆಟಿವ್ ರಿಪೋರ್ಟ್: ಸಿಎಂ ಅವರಿಗೆ ಪಾಸಿಟಿವ್ ಬಂದ ಬಳಿಕ 8 ದಿನ ಕ್ವಾರಂಟೈನ್ ಆಗಿದ್ದೆ. ಮೆಟ್ರೋ ಕಾಮಗಾರಿ ಚಾಲನೆ ವೇಳೆ ಅವರೊಂದಿಗಿದ್ದೆ. ಇಂದು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಪ್ರವಾಹ ನಿರ್ವಹಣೆ ಹಾಗೂ ಕೊರೊನಾ ಕೆಲಸದಲ್ಲಿ ತೊಡಗಿಸಿಕೊಳುತ್ತಿದ್ದೇನೆ ಎಂದು ಅವರು ತಿಳಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿ, ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಆಯುಕ್ತರು ಮಾತ್ರ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಅಂಜುಂ ಪರ್ವೇಜ್ ಅವರನ್ನು ಕಳೆದ 10 ದಿನಗಳ ಹಿಂದೆಯೇ ನೇಮಕ ಮಾಡಲಾಗಿದೆ. ಅವರು ಈ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಮಾತ್ರ ನೋಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊಂದಲ ಬೇಡ ಎಂದರು.