ನವದೆಹಲಿ: ಸಾಂವಿಧಾನಾತ್ಮಕವಾಗಿ ಖಾತರಿಪಡಿಸಲಾದ ಪ್ರತಿಭಟನೆಯ ಹಕ್ಕನ್ನು ಭಯೋತ್ಪಾದನಾ ಕೃತ್ಯದಂತೆ ನೋಡುವುದರ ಕುರಿತು ದಿಲ್ಲಿ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿಕೆಯೊಂದರಲ್ಲಿ ಸ್ವಾಗತಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ನತಾಶಾ ನರ್ವಾಲಾ ಮತ್ತು ದೇವಾಂಗನ ಕಲಿತಾ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ ಹೋರಾಟಗಾರ ಆಸಿಫ್ ಇಕ್ಬಾಲ್ ತನ್ಹಾರಿಗೆ ಜಾಮೀನು ನೀಡುವ ಆದೇಶ ಹೊರಡಿಸುತ್ತಾ ದೆಹಲಿ ಹೈಕೋರ್ಟ್, ನಾಗರಿಕರ ಪ್ರತಿಭಟನೆಯ ಹಕ್ಕಿನ ಕುರಿತಂತೆ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸರ್ಕಾರದ ದೃಷ್ಟಿಯಲ್ಲಿ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನಾ ಚಟುವಟಿಕೆಯ ನಡುವಿನ ರೇಖೆಯು ತೆಳುವಾಗುತ್ತಾ ಹೋಗುತ್ತಿದೆ. ಹಾಗೆಯೇ, ಸರ್ಕಾರವು ವಿರೋಧದ ಧ್ವನಿಗಳನ್ನು ನಿಗ್ರಹಿಸಲು ಉತ್ಸುಕವಾಗಿರುವುದು ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ಅನುದ್ದೇಶಿತ ವಿಧಾನದಲ್ಲಿ ಬಳಸುತ್ತಿರುವುದನ್ನೂ ಕೋರ್ಟ್ ಟೀಕಿಸಿದೆ.
ಇದೇ ರೀತಿ ಈ ತೀರ್ಪು ರಾಜಕೀಯ ವಿರೋಧಿಗಳ ವಿರುದ್ಧ ಕರಾಳ ಕಾನೂನುಗಳ ದುರುಪಯೋಗ ಮತ್ತು ಅಸಮ್ಮತಿಯ ಧ್ವನಿಗಳನ್ನು ನಿಗ್ರಹಿಸುವ ಬಿಜೆಪಿ ಸರ್ಕಾರದ ಪ್ರಯತ್ನಗಳಿಗೆ ಒಂದು ಎಚ್ಚರಿಕೆಯಾಗಿದೆ. ನ್ಯಾಯಾಲಯದಿಂದ ಜಾಮೀನು ಪಡೆದ ಈ ಮೂರು ಮಂದಿ ದಿಲ್ಲಿ ಪೊಲೀಸರಿಂದ ನಡೆಸಲಾದ ವಿಷಕಾರಿ ರಾಜಕೀಯ ಪ್ರತೀಕಾರದ ಬಲಿಪಶುಗಳಾಗಿದ್ದಾರೆ. ಅವರನ್ನು ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆಸಿದ ಪ್ರತಿಭಟನೆಗಾಗಿ ಗುರಿಪಡಿಸಲಾಯಿತು ಮತ್ತು ಈಶಾನ್ಯ ದಿಲ್ಲಿಯಲ್ಲಿ ಗಲಭೆಯ ‘ಮಾಸ್ಟರ್ ಮೈಂಡ್’ ಆಗಿರುವ ಸುಳ್ಳು ಆರೋಪದಲ್ಲಿ ಸಿಲುಕಿಸಲಾಯಿತು. ಜಾಮೀನು ದೊರೆತ ಬಳಿಕವೂ ಈ ಮೂವರನ್ನು ಬಿಡುಗಡೆಗೊಳಿಸಲು ವಿಳಂಬಿಸಿದ ದೆಹಲಿ ಪೊಲೀಸರ ಪ್ರಯತ್ನವು ನ್ಯಾಯಾಲಯ ವ್ಯಕ್ತಪಡಿಸಿದ ಕಳವಳವನ್ನು ಮತ್ತಷ್ಟು ಆಳವಾಗಿ ಚಿಂತಿಸುವಂತೆ ಮಾಡಿದೆ. ಅಂತಿಮವಾಗಿ, ನ್ಯಾಯಾಲಯಕ್ಕೆ ಅವರ ಬಿಡುಗಡೆಯ ವಾರಂಟನ್ನು ಹೊರಡಿಸಬೇಕಾಗಿ ಬಂತು. ಇದೇ ಪರಿಸ್ಥಿತಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವಂತಹ ಅಮಾಯಕರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ ತೀರ್ಪು ಅವರೆಲ್ಲರಿಗೂ ನ್ಯಾಯದ ನಿರೀಕ್ಷೆಯನ್ನು ಉಜ್ವಲವಾಗಿರಿಸಿದೆ. ಇದನ್ನೂ ಓದಿ: ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು