ಭೋಪಾಲ್: ಪ್ರತಿ ಭಾನುವಾರ ತಪ್ಪದೇ ಆಸ್ಪತ್ರೆ ಮತ್ತು ಸಿಎಂಎಚ್ಓ ಕಚೇರಿ ಆವರಣ ಶುಚಿಗೊಳಿಸಬೇಕೆಂಬ ಷರತ್ತು ವಿಧಿಸಿ ಖಂಡ್ವಾ ಸ್ಥಳೀಯ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಜಾಮೀನು ಪಡೆದ ಆರೋಪಿ ಕಸ ಗುಡಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
2020ರ ಡಿಸೆಂಬರ್ 24 ರಂದು ಖಂಡ್ವಾದ ಕಂಜರ್ ಬಡಾವಣೆಯಲ್ಲಿ ಎರಡು ಸಮುದಾಯಗಳ ನಡುವಿನ ಗಲಾಟೆ ಹಿಂಸೆಯ ರೂಪ ಪಡೆದುಕೊಂಡಿತ್ತು. ಈ ಗಲಾಟೆಯಲ್ಲಿ 18 ವರ್ಷದ ಮೊಹಮ್ಮದ್ ಅಲೀಂ ಮತ್ತು ಕೆಲ ಯುವಕರ ವಿರುದ್ಧ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿತ್ತು.
Advertisement
Advertisement
ಐಪಿಸಿ ಸೆಕ್ಷನ್ 307ರ ಅಡಿ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು. ಬಂಧಿತ ಮೊಹಮ್ಮದ್ ಅಲೀಂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಿಶೇಷ ಷರತ್ತು ಬದ್ಧ ಜಾಮೀನು ನೀಡಿದೆ. 25 ಸಾವಿರ ರೂ. ಬಾಂಡ್ ಮತ್ತು ಪ್ರತಿ ಭಾನುವಾರ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿ ಸಾರ್ವಜನಿಕ ಆಸ್ಪತ್ರೆ ಮತ್ತು ಸಿಎಂಎಚ್ಓ ಕಚೇರಿ ಆವರಣ ಶುಚಿಗೊಳಿಸಬೇಕೆಂದು ಆದೇಶಿಸಿದೆ.
Advertisement
Advertisement
ಅಲೀಂ ಕೆಲಸ, ಪೌರ ಕಾರ್ಮಿಕರು ಶಾಕ್: ಜಾಮೀನಿನ ಮೇಲೆ ಹೊರ ಬಂದ ಅಲೀಂ, ಮೊದಲ ಭಾನುವಾರ ಪೊರಕೆ ಹಿಡಿದು, ಮಾಸ್ಕ್ ತೊಟ್ಟು ಆಸ್ಪತ್ರೆಗೆ ಬಂದಿದ್ದಾನೆ. ಅಲೀಂ ಕಸ ಗುಡಿಸೋದನ್ನ ಕಂಡ ಸ್ಥಳದಲ್ಲಿದ್ದ ಪೌರ ಕಾರ್ಮಿಕರು ಒಂದು ಕ್ಷಣ ಶಾಕ್ ಆಗಿದ್ದರು. ತದನಂತರ ಕೋರ್ಟ್ ಆದೇಶದ ಹಿನ್ನೆಲೆ ಕೆಲಸ ಮಾಡುತ್ತಿರೋದಾಗಿ ಅಲಿಂ ಅಲ್ಲಿ ಸ್ವಚ್ಛತಾ ಸಿಬ್ಬಂದಿಗೆ ತಿಳಿಸಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಲೀಂ, ನ್ಯಾಯಾಲಯದ ಆದೇಶ ಒಂದು ರೀತಿಯಲ್ಲಿ ಖುಷಿ ತಂದಿದೆ. ಇದರ ಮೂಲಕ ಸ್ವಚ್ಛತಾ ಅಭಿಯಾನಕ್ಕೂ ಬೆಂಬಲ ನೀಡಿದಂತಾಗುತ್ತೆ. ಇಂದು ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ ಖುಷಿ ಆಯ್ತು ಅಂತ ಹೇಳಿದ್ದಾನೆ.