– ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಮಾಡಬೇಕು
ಚಿಕ್ಕೋಡಿ: ಕೊರೊನಾ ಎರಡನೇ ಅಲೆಯ ನಡುವೆ ಚಿಕ್ಕ ಮಕ್ಕಳಿಗೂ ಮಹಾಮಾರಿ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಹರಡಬಹುದು ಎಂಬ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಹೀಗಾಗಿ ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ನಮ್ಮ ಇಲಾಖೆಯ ವಿಶೇಷ ಮಕ್ಕಳ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ವತಿಯಿಂದ ಈಗಾಗಲೇ ಅಧಿಕಾರಿ ಮೋಹನರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಸಹ ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದರು.
Advertisement
Advertisement
ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ತಾಯಿಗೆ ಪಾಸಿಟಿವ್ ಬಂದು ತೀರಿ ಹೋಗಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು. ಶಾಶ್ವತಗಾಗಿ ಆ ಮಕ್ಕಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾನು ಸಹ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದನೆಯನ್ನ ನೀಡಿದ್ದಾರೆ ಎಂದು ಹೇಳಿದರು.
Advertisement
Advertisement
ಆ ಮಕ್ಕಳನ್ನ ನೋಡಲು ಯಾರಾದರೂ ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ನಾವು ಎಲ್ಲ ನೆರವು ನೀಡುತ್ತೇವೆ ಎಂದ ಅವರು ಮಕ್ಕಳ ದತ್ತು ವಿಚಾರದಲ್ಲಿ ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಕೆಲವು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳ ದತ್ತು ವಿಚಾರವಾಗಿ ಕೆಲವು ಫೇಕ್ ನಂಬರ್ ಹರಿಬಿಡಲಾಗಿದೆ. ಅಂಥ ನಂಬರ್ಗಳಿಗೆ ಕರೆ ಮಾಡಿ ಯಾರೂ ಸಹ ಮೋಸ ಹೋಗಬಾರದು. ಇಲಾಖೆಯ ಅಧಿಕೃತ ಹೆಲ್ಪ್ ಲೈನ್ 1098 ಗೆ ಕರೆ ಮಾಡಿ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಬೇಕಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಒತ್ತಾಯಿಸಿದ್ದಾರೆ.