ಶಿವಮೊಗ್ಗ: ಪೋಕ್ಸೋ ಕಾಯ್ದೆಯಡಿಯಲ್ಲಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿರುವುದು ವಿಷಾದದ ಸಂಗತಿ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಗರದ ಡಿ.ವಿ.ಎಸ್.ಶಾಲಾ ಸಭಾಂಗಣದಲ್ಲಿ ಪೋಕ್ಸೊ ಕಾಯ್ದೆ, ಕಳ್ಳಸಾಗಾಣೆ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Advertisement
Advertisement
ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗಕ್ಕೆ ಪೂರಕವಾಗಿ ಬಳಕೆಯಲ್ಲಿರುವ ಮೊಬೈಲ್ಗಳನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಕೆಲಸಗಳಿಗಾಗಿ ಬಳಸಿಕೊಳ್ಳುವಂತೆ ಸೂಚಿಸಿದ ನ್ಯಾಯಾಧೀಶರು ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಾದವರು ಸತ್ಯ ನುಡಿಯುವುದನ್ನೇ ರೂಢಿಸಿಕೊಳ್ಳಬೇಕು. ಶಾಲೆಗಳು ಮಾಹಿತಿ ಕೇಂದ್ರಗಳು. ಆದರೆ ವಿದ್ಯಾರ್ಥಿಗಳು ಈ ಕಲಿಕಾವಧಿಯಲ್ಲಿ ದೊರೆಯುವ ಅಮೂಲ್ಯ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
Advertisement
ಜ್ಞಾನಾರ್ಜನೆಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥವಾಗಿ ಕಳೆಯದೇ ಸದ್ಬಳಕೆ ಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡ ಜೀವಿತದ ಕೊನೆಯ ಅವಧಿಯವರೆಗೆ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಮಾತ್ರವಲ್ಲದೇ ಅದು ಕಂಟಕ ಪ್ರಾಯವೂ ಆಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಇಡುವ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ವಹಿಸಬೇಕಿದೆ ಎಂದರು.
Advertisement
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ಇದೆ. ಕೆಲವೊಮ್ಮೆ ಜೀವಾವಧಿಯೂ ಆಗಬಹುದು. ಪ್ರತಿ ವಿದ್ಯಾರ್ಥಿಗಳು ಸ್ವರಕ್ಷಣೆಗಾಗಿ ಅಲ್ಪ ಪ್ರಮಾಣದ ಕಾನೂನು ತಿಳಿದುಕೊಂಡಿರುವುದು ಇಂದಿನ ತುರ್ತು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಬಿ.ಇ.ಒ. ಪಿ.ನಾಗರಾಜ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಡಿ.ವಿ.ಎಸ್. ಕಾಲೇಜಿನ ಪ್ರಾಂಶುಪಾಲ ಶೇಷಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.