– ದೃಶ್ಯ ಸಿಸಿಟಿವಿಯಲ್ಲಿ ಸೆರೆ
– 6 ಮಂದಿ ಸಿಬ್ಬಂದಿ ಅಮಾನತು
ತುಮಕೂರು: ಕಳ್ಳತನ, ರಾಬರಿ, ಕೊಲೆ ಯತ್ನ, ಬೆದರಿಕೆ ಹೀಗೆ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ವ್ಯಕ್ತಿಯೊಬ್ಬನ ಮೇಲೆ ಈ ಹಿಂದೆಯೂ ಅವನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಸುಲಿಗೆಯಂತ ಪ್ರಕರಣಗಳಿವೆ. ಹೀಗಿದ್ರೂ ಆತನಿಗೆ ಬುದ್ಧಿ ಬಂದೇ ಇರ್ಲಿಲ್ಲ. ಕಳೆದ 20 ದಿನಗಳ ಹಿಂದಷ್ಟೇ ತುಮಕೂರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದ. ಪೊಲೀಸರು ಕೂಡ ಅವನನ್ನ ಎತ್ತಾಕ್ಕೊಂಡು ಬಂದು ಠಾಣೆಯಲ್ಲಿ ಕೂರಿಸಿದ್ದರು. ಆದರೆ ಪೊಲೀಸ್ ಕರ್ತವ್ಯ ಪ್ರಜ್ಞೆ ಜಾರಿದ್ದಕ್ಕೆ ಠಾಣೆಯಿಂದಲೇ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ.
Advertisement
ಹೌದು. ಆಗಸ್ಟ್ 1 ರಂದು ತುಮಕೂರು ನಗರದ ಅಂತರಸನಹಳ್ಳಿ ರಂಗಪ್ಪ ಎಂಬಾತ ಇತ್ತೀಚೆಗೆ ತಾಲೂಕಿನ ಹಂಚಿಹಳ್ಳಿ ಗ್ರಾಮದ ಮನೆಗೆ ನುಗ್ಗಿ ಮಹಿಳೆಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಈ ಬಗ್ಗೆ ಲಕ್ಷ್ಮಿ ಕೋರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ಆ. 6ರಂದು ಕೋರ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿತ್ತು. ಆದರೆ ಖತರ್ನಾಕ್ ಕಳ್ಳ ರಂಗಪ್ಪ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರಾತ್ರೋ ರಾತ್ರಿ ಠಾಣೆಯಿಂದ ಎಸ್ಕೆಪ್ ಆಗಿದ್ದಾನೆ. ಕೈದಿಗಳ ಸೆಲ್ಲಲ್ಲಿ ರಂಗಪ್ಪನನ್ನು ಇಟ್ಟಿದ್ರು. ಆದರೆ ಲಾಕ್ ಮಾಡಿರಲಿಲ್ಲ, ಪೊಲೀಸರು ಮಧ್ಯರಾತ್ರಿ ಜಸ್ಟ್ ಮಂಪರಿನಲ್ಲಿ ಇದ್ರು. ಇದನ್ನು ಗಮನಸಿದ ರಂಗಪ್ಪ ಡೋರ್ ತೆಗೆದು ಎಸ್ಕೇಪ್ ಆಗಿದ್ದು, ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯ 6 ಜನ ಪೊಲೀಸ್ ಸಿಬ್ಬಂದಿಯನ್ನ ಕರ್ತವ್ಯಲೋಪದಡಿ ಎಸ್ಪಿ ಡಾ.ಕೆ ವಂಶಿಕೃಷ್ಣ ಸಸ್ಪೆಂಡ್ ಮಾಡಿದ್ದಾರೆ. ಬಳಿಕ ಎಸ್ಕೇಪ್ ಆಗಿದ್ದ ರಂಗಪ್ಪನ ಬಂಧನಕ್ಕಾಗಿ ಶಿರಾ ಠಾಣೆ ಪಿಎಸ್ಐ ಭಾರತಿ ಮತ್ತು ಸಿಬ್ಬಂದಿ ಶಿವಕುಮಾರ್, ನಾಗರಾಜು ನೇತೃತ್ವದ ತಂಡವನ್ನ ರಚಿಸಲಾಗಿತ್ತು. ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಮಾಡಿದ ತಂಡ ಆರೋಪಿಯನ್ನು ಮಧುಗಿರಿ ತಾಲೂಕು ಮರುವೇಕೆರೆ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈವರೆಗೆ ಈತನ ವಿರುದ್ಧ ವಡ್ಡರಹಳ್ಳಿ, ಶಂಭೋನಹಳ್ಳಿ, ಮುದ್ದರಾಮಯ್ಯನ ಪಾಳ್ಯ, ಡಿ.ಕೊರಟಗೆರೆ, ಹಿರೇಗುಂಡಗಲ್, ಹಂಚಿಹಳ್ಳಿ ಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ಮಲಗಿದ್ದ ಹೆಂಗಸರ ಸರಗಳನ್ನು ಕಳವು ಮಾಡಿದ್ದ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7, ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
Advertisement
ಒಟ್ಟಾರೆ ಪೊಲೀಸರ ಕೈಯಿಂದ ಎಸ್ಕೇಪ್ ಆಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ರಂಗಪ್ಪ ಕೊನೆಗೂ ಕಂಬಿಹಿಂದೆ ಹೋಗಿದ್ದಾನೆ. ಇತ್ತ ಠಾಣೆಯ ತುಂಬಾ ಸಿಬ್ಬಂದಿ ಇದ್ರೂ ಕಳ್ಳನೊಬ್ಬನನ್ನ ನೋಡಿಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಕಪ್ಪುಚುಕ್ಕೆ ಮಾತ್ರ ಹಾಗೆಯೇ ಉಳ್ಕೊಂಡಿದೆ.