ಮೈಸೂರು: ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನಿಡಿದ್ದಾರೆ.
ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಆನ್ ಲೈನ್ ಶಿಕ್ಷಣ ಪದ್ಧತಿಗೆ ವಿರೋಧ ಮಾಡುತ್ತಿದ್ದೇನೆ. ಇದೀಗ ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮ ಅಲ್ಲ. ನನ್ನ ಪ್ರಕಾರ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದರು.
Advertisement
Advertisement
ಮಕ್ಕಳಿಗೆ ನೇರವಾಗಿ ತರಗತಿಯಲ್ಲೇ ಭೋದನೆ ಮಾಡಬೇಕು. ಆ ಕಾರಣಕ್ಕಾಗಿ ಅಕ್ಟೋಬರ್ವರೆಗೆ ಶಾಲೆ ತೆರೆಯಬಾರದು ಎಂದು ಸರ್ಕಾರಕ್ಕೆ ಸಲಹೆಯಿತ್ತರು. ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸರ್ಕಾರ ತೀರ್ಮಾನ ಮಾಡಬೇಕು ಎಂದರು.
Advertisement
ಪಬ್ಲಿಕ್ ಟಿವಿ ಕಳೆದ ಒಂದು ವಾರದಿಂದ ಆನ್ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಎಲ್ಕೆಜಿ, ಯುಕೆಜಿ ಹಾಗೂ ಸಿಬಿಎಸ್ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.
Advertisement
ಇತ್ತ ಕೆಲ ಖಾಸಗಿ ಶಾಲೆಗಳು ಆನ್ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆಯೂ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಕೂಡ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಆನ್ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.