– ಕೆರೆಗೆ ಬೇಕಿದೆ ತಡೆಗೋಡೆ
ಮಡಿಕೇರಿ: ಹಲವು ವರ್ಷಗಳಿಂದ ಹೂಳುತುಂಬಿ ಪಾಳು ಬಿದ್ದಿದ್ದ ಅಭ್ಯತ್ ಮಂಗಲ ಸಾರ್ವಜನಿಕರ ಕೆರೆಯನ್ನು ನರೇಗಾ ಯೋಜನೆಯಡಿ ಯುವಕರ ತಂಡ ಪುನಶ್ಚೇತನಗೊಳಿಸಿದ್ದು, ಮರುಜೀವ ನೀಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್ಮಂಗಲ ಗ್ರಾಮದ ಅತ್ತಿಮಂಗಲ ಕೆರೆ ಹಲವು ವರ್ಷಗಳಿಂದ ಹೂಳು ತುಂಬಿತ್ತು. ಕಸದ ಗಿಡಗಳು ಬೆಳೆದು ಪಾಳು ಬಿದ್ದಿತ್ತು. ಮಾತ್ರವಲ್ಲದೇ ಕೆಲವರು ರಾತ್ರಿ ವೇಳೆ ಕೋಳಿ ಮಾಂಸದ ತ್ಯಾಜ್ಯವನ್ನು ಕೆರೆಯ ಬದಿಯಲ್ಲಿ ಎಸೆಯುತ್ತಿದ್ದು, ದುರ್ವಾಸನೆಯಿಂದ ಕೂಡಿತ್ತು.
Advertisement
Advertisement
ಇದನ್ನು ಅರಿತ ನೆಲ್ಯಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ ಯುವಕರ ತಂಡ ಕೆರೆಯ ಪುನಶ್ಚೇತನಕ್ಕೆ ಮುಂದಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಕೆರೆಯ ಅಭಿವೃದ್ಧಿಗೆ ಅನುವು ಮಾಡಿಕೊಡಲಾಗಿದೆ. ಅತ್ತಿಮಂಗಲ ಸಮೀಪದ ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಕೆರೆಯನ್ನು ಕಳೆದ ಒಂದು ತಿಂಗಳಿನಿಂದ ಸ್ವಚ್ಛಗೊಳಿಸಲಾಗಿದೆ. ಕೆರೆಯ ಸುತ್ತಲೂ ಇದ್ದ ಕುರಚಲು ಗಿಡ ಹಾಗೂ ಹುಲ್ಲನ್ನು ತೆರವುಗೊಳಿಸಿ, ಕೆರೆಯ ಹೂಳನ್ನು ತೆಗೆಯಲಾಗಿದೆ.
Advertisement
ರಸ್ತೆಯ ಬದಿಯಲ್ಲಿನ ಕಸದ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗಿದೆ. ಒಂದು ತಿಂಗಳಿನಿಂದ ಯುವಕರ ತಂಡ ಕೆರೆಯ ಅಭಿವೃದ್ಧಿಯಲ್ಲಿ ತೊಡಗಿದ್ದು, ಇದೀಗ ಕೆರೆಗೆ ಜೀವಕಳೆ ಬಂದಿದೆ. ಬೇಸಿಗೆಯಲ್ಲಿ ಗ್ರಾಮದ ಕೃಷಿಕರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಕೆರೆ ಅಭಿವೃದ್ಧಿಯಿಂದಾಗಿ ಸ್ಥಳೀಯ ಕೃಷಿಕರಿಗೆ ಉಪಯೋಗವಾಗಲಿದೆ. ಸುಮಾರು ಒಂದು ಏಕರೆ ವಿಸ್ತೀರ್ಣದಲ್ಲಿರುವ ಕೆರೆ ಈ ಹಿಂದೆ ಸ್ಥಳೀಯ ಕೃಷಿಕರಿಗೆ ನೀರಿನ ಮುಖ್ಯ ಮೂಲವಾಗಿತ್ತು. ಬಳಿಕ ನೀರಿಲ್ಲದೇ ಪಾಳು ಬಿದ್ದಿದ್ದು, ಗದ್ದೆಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಪಂಚಾಯಿತಿಯ 5 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿದ್ದು, ಸುತ್ತಲಿನ ಜಾಗದಲ್ಲಿ ಹೂ ಗಿಡಗಳನ್ನು ನೆಟ್ಟು ಕೆರೆಯ ಅಂದ ಹೆಚ್ಚಿಸಲು ಸಹ ಯುವಕರು ಮುಂದಾಗಿದ್ದಾರೆ.
Advertisement
ಮುಖ್ಯ ರಸ್ತೆಯ ತಿರುವಿನಲ್ಲಿ ಸಾರ್ವಜನಿಕ ಕೆರೆ ಇದ್ದು, ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಕೆರೆಯ ಸುತ್ತಲೂ ಕಬ್ಬಿಣದ ಬೇಲಿ ಹಾಗೂ ಬಕೆರೆಯ ಎರಡೂ ಬದಿ ತಿರುವು ಹಾಗೂ ಇಳಿಜಾರು ಇರುವುದರಿಂದ ಕೆರೆಗೆ ಅಡ್ಡಲಾಗಿ ಕಬ್ಬಿಣದ ತಡೆಗೋಡೆ ಅಳವಡಿಸಬೇಕು ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.