ಉಡುಪಿ: ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಶ್ರೀಕೃಷ್ಣಮಠದ ಕಡೆಗೋಲು ಕೃಷ್ಣ ಪಟ್ಟಾಭಿರಾಮನಾಗಿ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಈ ಮೂಲಕ ಭಕ್ತ ಕೋಟಿಯ ಕನಸು ನನಸಾಗಿದೆ. ಉತ್ತರ ಭಾರತದಲ್ಲಿ ಧಾರ್ಮಿಕ ವಿಧಿವಿಧಾನಗಳು ಶ್ರೀರಾಮನಿಗೆ ಅರ್ಪಣೆಯಾಗುತ್ತಿದ್ದಂತೆ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆಯನ್ನು ನೆರವೇರಿಸಲಾಯಿತು.
Advertisement
Advertisement
ಉಡುಪಿ ಶ್ರೀಕೃಷ್ಣನಿಗೆ ಈ ಸಂದರ್ಭದಲ್ಲಿ ಪಟ್ಟಾಭಿರಾಮನ ಅಲಂಕಾರ ಮಾಡಲಾಗಿತ್ತು. ಈ ಮೂಲಕ ಶ್ರೀಕೃಷ್ಣನಲ್ಲಿ ಶ್ರೀರಾಮನನ್ನು ಕಂಡುಕೊಳ್ಳಲಾಯಿತು. ಅಷ್ಠ ಮಠಗಳಲ್ಲಿ ಒಂದಾದ ಕಾಣಿಯುರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವಿಶೇಷ ಅಲಂಕಾರ ಮಾಡಿದ್ದರು. ಶ್ರೀಕೃಷ್ಣನಿಗೆ ರಾಮಾಲಂಕಾರ ಮಾಡಿ ಕೃಷ್ಣನನ್ನು ಶ್ರೀ ರಾಮನನ್ನಾಗಿಸಿದರು.
Advertisement
ಬಿಲ್ಲು ಬಾಣವನ್ನು ಹಿಡಿದು, ಸಿಂಹಾಸನದಲ್ಲಿ ಕುಳಿತು ಪಟ್ಟಾಭಿಷೇಕ ಆದ ದಿನವನ್ನು ಸ್ವಾಮೀಜಿಗಳು ನೆನಪು ಮಾಡಿ ಕೊಟ್ಟರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಪಟ್ಟಾಭಿರಾಮನಿಗೆ ಮಹಾಪೂಜೆಯನ್ನು ನೆರವೇರಿಸಿದರು.
Advertisement
ಉಡುಪಿ ಶ್ರೀಕೃಷ್ಣ ಅಲಂಕಾರ ಪ್ರಿಯನಾಗಿದ್ದು, ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಿನದ ವಿಶೇಷತೆ ಹೊಂದಿಕೆಯಾಗುವಂತೆ ಅಲಂಕಾರ ಇರುತ್ತದೆ. ಪ್ರತಿ ಶುಕ್ರವಾರ ಕೃಷ್ಣನಿಗೆ ದೇವಿಯ ಅಲಂಕಾರ ಮಾಡಲಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಿರ್ಮಾಣದ ಸಂದರ್ಭದಲ್ಲಿ ರಾಮನ ಪಟ್ಟಾಭಿಷೇಕ ನೆನಪಿಸುವ ಪಟ್ಟಾಭಿರಾಮ ಅಲಂಕಾರವನ್ನು ನೆರವೇರಿಸಲಾಯಿತು.