ಚಿತ್ರದುರ್ಗ: ಪಂಚಮಸಾಲಿ ಹಾಗೂ ಕುರುಬ ಸಮುದಾಯಗಳ ಪಾದಯಾತ್ರೆ ಬೆನ್ನಲ್ಲೆ ಸರ್ಕಾರದ ವಿರುದ್ಧ ಮತ್ತೊಂದು ಸಮುದಾಯದ ಪಾದಾಯಾತ್ರೆಗೆ ಸಿದ್ಧತೆ ನಡೆದಿದೆ. ಶಿರಾ ಉಪ ಚುನಾವಣೆ ವೇಳೆ ಘೋಷಿಸಿದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಕೇವಲ ಚುನಾವಣಾ ಗಿಮಿಕ್ ಎನಿಸಿದೆ ಎಂದು ಆಕ್ರೋಶಗೊಂಡಿರುವ ಆ ಸಮುದಾಯದ ನಾಯಕರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.
Advertisement
ಶಿರಾ ಉಪ ಚುನಾವಣೆ ವೇಳೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ನಾಲ್ಕು ತಿಂಗಳುಗಳೇ ಕಳೆದರೂ ಸಹ ಈ ನಿಗಮಕ್ಕೆ ಈವರೆಗೆ ಅಧ್ಯಕ್ಷರು ನೇಮಕವಾಗಿಲ್ಲ. ಇದಕ್ಕಿಂತ ತಡವಾಗಿ ಘೋಷಣೆಯಾದ ಎಲ್ಲಾ ನಿಗಮಗಳಿಗೆ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಣವನ್ನು ಬಿಡುಗಡೆ ಮಾಡಿ, ನಿಗಮಗಳು ಸಮುದಾಯದ ಅಭಿವೃದ್ಧಿಗೆ ಚುರುಕಾಗಿ ಕೆಲಸ ಮಾಡುತ್ತಿವೆ. ಆದರೆ ಇತರೆ ನಿಗಮಗಳಿಗಿಂತ ಮುಂಚೆಯೇ ಘೋಷಣೆಯಾದ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಮಾತ್ರ ಈ ಬಿಜೆಪಿ ಸರ್ಕಾರ ನಯಾಪೈಸೆ ಹಣ ಬಿಡಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಶಿವುಯಾದವ್, ಸಮುದಾಯದ ಹೋರಾಟಗಾರರು ಹಾಗೂ ಮಠಾಧೀಶರೊಂದಿಗೆ ಸಭೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಡುಗೊಲ್ಲ ಸಮುದಾಯದಿಂದಲೂ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಶಿರಾ ಚುನಾವಣೆ ವೇಳೆ ಭಾರೀ ಭರವಸೆ ನೀಡಿ ಘೋಷಿಸಲ್ಪಟ್ಟಿದ್ದ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಕಾರ್ಯಾರಂಭ ವಿಳಂಬವಾಗಿರುವ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪ್ರತಿಕ್ರಿಯಿಸಿರುವ ಶಿರಾ ಕ್ಷೇತ್ರದ ರಾಜೇಶ್ ಗೌಡ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಡುಗೊಲ್ಲ ಸಮುದಾಯದಲ್ಲಿ ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೀಗಾಗಿ ನಿಗಮಕ್ಕೆ ಈವರೆಗೆ ಯಾವುದೇ ಅನುದಾನ ನೀಡಿಲ್ಲ ಎನ್ನುವ ಮೂಲಕ ಕಾಡುಗೊಲ್ಲ ಸಮುದಾಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಈ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿ, ಹಣ ನೀಡಲಿದ್ದಾರೆನ್ನುವ ಮೂಲಕ ಅಲ್ಲಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.
Advertisement