ಮೈಸೂರು: ನ್ಯಾಯಕ್ಕಾಗಿ ನ್ಯಾಯಾಲಯದ ಆವರಣದಲ್ಲಿಯೇ ಮಹಿಳೆ ಬಿದ್ದು ಹೊರಳಾಡಿದ ಮನಕಲಕುವ ಘಟನೆ ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ.ಕೋಟೆಯ ಲಕ್ಷ್ಮಿ ಅವರ ಆಕ್ರಂದನದ ಕಣ್ಣೀರು ಕೋರ್ಟ್ ಆವರಣದಲ್ಲಿದ್ದ ಜನರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದ್ದವು. 2005ರಲ್ಲಿ ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಯ ಸತೀಶ್ ಎಂಬಾತನ ಜೊತೆ ಲಕ್ಷ್ಮಿ ವಿವಾಹವಾಗಿತ್ತು. ಹೆಣ್ಣು ಮಗು ಹುಟ್ಟಿದ್ದರಿಂದ ಸತೀಶ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಅಲ್ಲದೇ ಮತ್ತೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ.
ಲಕ್ಷ್ಮಿ ಅವರಿಗೆ ವಿಚ್ಛೇದನ ನೀಡದ ಸತೀಶ್ ಅಕ್ರಮ ಸಂಬಂಧ ಮುಂದುವರಿಸಿದ್ದನು. ಇದರಿಂದ ಬೇಸತ್ತ ಲಕ್ಷ್ಮಿ, ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಮಗಳು ಹರ್ಷಿತಾ ಜೊತೆ ಆಗಮಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ತಂದೆಯನ್ನ ಕಂಡ ಹರ್ಷಿತಾ ಮತನಾಡಿಸಲು ಹೋಗಿದ್ದಾಳೆ. ತನ್ನ ಮುಂದಿನ ಭವಿಷ್ಯಕ್ಕಾದ್ರೂ ಸಹಾಯ ಮಾಡುವಂತೆ ತಂದೆಯ ಬಳಿ ಮನವಿ ಮಾಡಿಕೊಂಡಿದ್ದಾಳೆ.
ಈ ವೇಳೆ ಸತೀಶ್ ಕೆಟ್ಟ ಪದಗಳಿಂದ ಮಗಳನ್ನ ನಿಂದಿಸಿದ್ದಾನೆ. ಅಲ್ಲಿಯೇ ಇದ್ದ ಲಕ್ಷ್ಮಿ ಪತಿಯನ್ನ ಪ್ರಶ್ನಿಸಿಸಿದ್ದಕ್ಕೆ ಪತ್ನಿಯನ್ನು ಅವಾಚ್ಯ ಪದಗಳಿಂದ ರಸ್ತೆಯಲ್ಲಿ ತಳ್ಳಿ ಪರಾರಿಯಾಗಿದ್ದಾನೆ. ಪತಿಯ ವರ್ತನೆಗೆ ಬೇಸತ್ತ ಲಕ್ಮಿ ರಸ್ತೆಯಲ್ಲಿಯೇ ಕುಳಿತು ಆವರಣದಲ್ಲಿ ಕಣ್ಣೀರು ಹಾಕಿದ್ದಾರೆ.