ಬೆಂಗಳೂರು: ರಾಜ್ಯ ಹಾಗೂ ಬೆಂಗಳೂರಿನಲ್ಲಿ ಯಾವುದೇ ಲಾಕ್ಡೌನ್ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಪಕ್ಷಗಳ ಶಾಸಕರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಶಾಸಕರು ಕೊಟ್ಟಿದ್ದಾರೆ. ಅದನ್ನು ಜಾರಿಗೆ ತರುತ್ತೇವೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಸೋಂಕು ಕಡಿಮೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಮೀಸಲು ಇಡಲು ಸೂಚನೆ ನೀಡಲಾಗುತ್ತದೆ. ರೋಗ ಲಕ್ಷಣಗಳು ಇಲ್ಲದವರ ಕ್ವಾರಂಟೈನ್ ಮಾಡಲು ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
Advertisement
Advertisement
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿ ಬಳಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಶಾಸಕರಿಗೆ ಸೂಚಿಸಿದ್ದೇವೆ. ಒಂದು ವೇಳೆ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಗಮನಕ್ಕೆ ತರಲು ತಿಳಿಸಿದ್ದೇವೆ. ಬೆಡ್ ಅಲಾಟ್ಮೆಂಟ್ ಬಗ್ಗೆ ಉಸ್ತುವಾರಿಗೆ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ನೇಮಿಸಿದ್ದೇವೆ ಎಂದು ತಿಳಿಸಿದರು.
Advertisement
ಲಾಕ್ ಡೌನ್ ಇಲ್ಲ, ನೋ ಲಾಕ್ ಡೌನ್. ಲಾಕ್ ಡೌನ್ ಚರ್ಚೆಗೆ ಅಂತ್ಯ ಹಾಡಿ ಆರ್ಥಿಕ ಚೇತರಿಕೆ ಜತೆಗೆ ಕೋವಿಡ್ ನಿಯಂತ್ರಣ ಆಗಲಿದೆ. ಜೀವ, ಜೀವನ ಎರಡೂ ಮುಖ್ಯವಾಗಿದೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು ಎಂದು ಹೇಳಿದರು.
Advertisement
ಕಾರ್ಪೊರೇಷನ್ನ ಪ್ರತಿ ವಾರ್ಡ್ ಗೆ 25 ಲಕ್ಷ ರೂ. ಮೀಸಲಿಡಲಾಗುತ್ತದೆ. ಅಲ್ಲಿನ ಜನರ ಆರೋಗ್ಯಕ್ಕಾಗಿ ಹಣವನ್ನು ಬಳಸಲಾಗುತ್ತದೆ. ಬೆಂಗಳೂರಿನಲ್ಲಿ ಹೆಚ್ಚಿನ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಶೇ.80ರಷ್ಟು ಜನರು ಬಡವರು ಲಾಕ್ಡೌನ್ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳುವಂತೆ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಸಲಹೆ ನೀಡಿದ್ದಾರೆ. ಅದರಂತೆ ಲಾಕ್ಡೌನ್ ವಿಚಾರವನ್ನು ಸರ್ಕಾರ ಕೈಬಿಟ್ಟಿದೆ ಎಂದರು.