ಭುವನೇಶ್ವರ: 40 ವರ್ಷಗಳ ಜೀವನದಲ್ಲಿ ಕಠಿಣ ಕೆಲಸ ಮತ್ತು ಮಕ್ಕಳನ್ನು ಬೆಳೆಸಿದ ನಂತರ ಒಬ್ಬ ಯಶಸ್ವಿ ವ್ಯಕ್ತಿ ಬಹುಶಃ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು, ತೋಟಗಾರಿಕೆ ಮಾಡಿಕೊಂಡು, ತಮ್ಮ ಸಂಬಂಧಿಗಳೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುವುದು ಸರ್ವೇಸಾಮಾನ್ಯ. ಆದರೆ ಒಡಿಶಾದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ವೈದ್ಯರಾಗಲು ಮುಂದಾಗಿದ್ದಾರೆ.
1956 ರಲ್ಲಿ ಜನಿಸಿದ ಜೇ ಕಿಶೋರ್ ಪ್ರಧಾನ್ ಇದೀಗ ವೈದ್ಯರಾಗಲು ನೀಟ್ ಬರೆದು ತೇರ್ಗಡೆಗೊಂಡವರು. ಒಡಿಶಾದ ಪ್ರಧಾನ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ (ವಿಮ್ಸಾರ್)ನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ತರಗತಿಗಾಗಿ ತಯಾರಾಗಿದ್ದಾರೆ.
Advertisement
Advertisement
ಒಡಿಶಾದ ಬಾರ್ ಗ ಜಿಲ್ಲೆಯ ಅಟಾಬಿರಾದವರಾದ ಜೇ ಕಿಶೋರ್ ಪ್ರಧಾನ್ ಎಂಬಿಬಿಎಸ್ ಕಲಿಯಲು ಬೇಕಾದ ಎಲ್ಲಾ ತಯಾರಿ ಮುಗಿಸಿದ್ದಾರೆ. ಹಿರಿಯ ನಾಗರೀಕರಾದ ಇವರಿಗೆ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ನೆಫ್ರಾಲಜಿ ಪರೀಕ್ಷೆಯಿಂದ ರಿಯಾಯಿತಿ ಕೊಡಲಾಗಿದ್ದು, ಅಧ್ಯಯನಕ್ಕಾಗಿ ಅವಕಾಶ ಮಾಡಿ ಕೊಡಲಾಗಿದೆ.
Advertisement
2016ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ನಂತರ ಇದೀಗ ಈ ನಿರ್ಧಾರವನ್ನು ಕಂಡು ಹಲವರು ಅಶ್ಚರ್ಯಗೊಂಡಿದ್ದಾರೆ. ಜೇ ಕಿಶೋರ್ ಪ್ರಧಾನ್ ಅವರು ಅನೇಕ ವರ್ಷಗಳಿಂದ ಕಂಡಿದ್ದ ಕನಸನ್ನು ನನಸು ಮಾಡಲು ಹೊರಟಿದ್ದು ಇದರ ಕುರಿತು ಹೇಳಿಕೆ ಕೊಟ್ಟಿದ್ದಾರೆ. 1970 ದಶಕದಲ್ಲಿ ನನ್ನ ಕನಸನ್ನು ಈಡೇರಿಸಲು ಆಗಿರಲಿಲ್ಲ. ನಂತರ ತಯಾರಿಯನ್ನು ನಿರಂತರ ಮುಂದುವರಿಸಿದೆ. ಬಿಎಸ್ಸಿ ಸೇರಿಕೊಂಡ ನಂತರ ಈ ಕನಸಿಗೆ ಇನ್ನಷ್ಟೂ ರೆಕ್ಕೆ ಪುಕ್ಕಗಳು ಸೇರಿದವು ಆದರೆ ಸಾಧಿಸಲು ಆಗಿರಲ್ಲ. ಈ ಪ್ರಜ್ಞೆ ನನ್ನನ್ನು ಕಾಡುತ್ತಲೇ ಇತ್ತು ಎಂದಿದ್ದಾರೆ.
Advertisement
ಇದಲ್ಲದೆ ನಾನು ವೈದ್ಯಕೀಯ ವಿಜ್ಞಾನಕ್ಕೆ ಹೆಚ್ಚಿನ ಒಲವನ್ನು ತೋರಿದ್ದು 1982ರಲ್ಲಿ. ನನ್ನ ತಂದೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 1987ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಉನ್ನತ ಚಿಕಿತ್ಸೆಗಾಗಿ ವೆಲ್ಲೂರಿಗೆ ಕರೆದೊಯ್ಯಲಾಯಿತು. ಯಶಸ್ವಿ ಚಿಕಿತ್ಸೆಯ ಪರಿಣಾಮವಾಗಿ ನನ್ನ ತಂದೆ ಜನವರಿ 2010ರ ವರೆಗೆ ಬದುಕುಳಿದರು. ಇದರಿಂದ ನನಗೆ ಇನ್ನಷ್ಟೂ ಹೆಚ್ಚಿನ ಗಮನ ವೈದ್ಯಕೀಯದತ್ತ ನೆಟ್ಟಿತು ಎಂದು ವಿವರಿಸಿದರು.
ವೈದ್ಯಕೀಯ ಅಧ್ಯಯನದ ಹೆಚ್ಚಿನ ಆಸಕ್ತಿಯಿಂದಾಗಿ 15 ವರ್ಷಗಳ ಬ್ಯಾಕಿಂಗ್ ಸೇವೆಯ ನಂತರ ಸ್ವಯಂಪ್ರೇರಿತ ನಿವೃತ್ತಿ ಪಡೆದುಕೊಳ್ಳುವ ಹುಚ್ಚಾಟಕ್ಕೆ ಹೋಗಿದ್ದೆ, ಆದರೆ ಕೊನೆಗೆ ಕುಟುಂಬ ನಡೆಸುವ ಯೋಚನೆಯ ಪರಿಣಾಮ ಕೆಲಸ ತ್ಯಜಿಸುವ ಯೋಚನೆ ಕೈ ಬಿಟ್ಟೆ.
ನನಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಅವರು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅವರ ತಯಾರಿಯಲ್ಲಿ ನಾನು ಸಹಾಯ ಮಾಡುತ್ತಿದ್ದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದ ನನ್ನನ್ನು ಗಮನಿಸಿದ ನನ್ನ ಮಕ್ಕಳು ಕಲಿಕೆಗೆ ನನ್ನನ್ನು ಪ್ರೇರೇಪಿಸಿದರು ಎನ್ನುತ್ತಾರೆ ಕಿಶೋರ್ ಪ್ರಧಾನ್.
ಅಧ್ಯಯನಕ್ಕಾಗಿದ್ದ ವಯಸ್ಸಿನ ಮಿತಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೂ ನನ್ನ ಸಂಕಲ್ಪವನ್ನು ಈಡೇರಿಸಲು ದಾರಿ ಮಾಡಿ ಕೊಟ್ಟಿತ್ತು ಮತ್ತು ಎಂಬಿಬಿಎಸ್ ಕಲಿಯುವುದನ್ನು ಸವಾಲಾಗಿ ಸ್ವೀಕರಿಸಿದೆ ಎಂದರು. ನೀಟ್ನಲ್ಲಿ 175 ಅಂಕಗಳಿಸುವ ಮೂಲಕ 5,94,380ನೇ ರ್ಯಾಂಕ್ಗಳಿಸಿ ವಿಮ್ಸಾರ್ನಲ್ಲಿ ಎಂಬಿಬಿಎಸ್ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ನನ್ನ ಅವಳಿ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಕಳೆದ ತಿಂಗಳು ದುರದೃಷ್ಟಕರವಾಗಿ ನಿಧನ ಹೊಂದಿದ್ದರಿಂದ ಈ ಸಂಭ್ರಮವನ್ನು ಆಚರಿಸಲು ಸಾಧ್ಯವಾಗಿಲ್ಲ ಇದನ್ನು ಹೊರತು ನಾನು ಮಗಳ ನೆನಪಿಗಾಗಿ ಅಧ್ಯಯನ ಮಾಡುತ್ತೇನೆ ಎನ್ನುತ್ತಾರೆ ಕಿಶೋರ್ ಪ್ರಧಾನ್.
ಪ್ರಧಾನ್ ಅವರು ಎಂಬಿಬಿಎಸ್ ಮುಗಿಸುವ ಹೊತ್ತಿಗೆ ಅವರಿಗೆ 69 ವರ್ಷವಾಗುತ್ತದೆ. ಅಧ್ಯಯನದ ನಂತರ ಸೇವೆ ಸೇರಲು ಸಿದ್ಧರಾಗಿದ್ದೀರ ಎಂದು ಪ್ರಶ್ನಿಸಿದಾಗ ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ 5 ವರ್ಷಗಳ ನಂತರದ ದಿನಗಳಲ್ಲಿ ಖಾಸಗಿಯಾಗಿ ಅಭ್ಯಾಸ ಮಾಡುತ್ತಲೇ ಇರುತ್ತೇನೆಂದು ಹೇಳಿದರು.
ಕಿಶೋರ್ ಪ್ರಧಾನ್ ಪದವಿ ಮುಗಿದ ತಕ್ಷಣ ಟೆಲಿಕಾಂ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ನಂತರ ಕೆಲಕಾಲ ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಶಿಕ್ಷಕರಾಗಿ ಸೇರಿದ್ದರು. ನಂತರ 1983ರಲ್ಲಿ ಎಸ್ಬಿಐ ಉದ್ಯೋಗಿಯಾದರು.
ವಿಮ್ಸಾರ್ನ ಡೀನ್ ಮತ್ತು ಪ್ರಾಂಶುಪಾಲರಾದ ಬ್ರಜಮೋಹನ್ ಮಿಶ್ರಾ ಮಾತನಾಡಿ, ನಾನು ಪ್ರಧಾನ್ ಅವರಿಂದ ಒಂದು ವರ್ಷ ಹಿರಿಯವನಾಗಿದ್ದು ಈ ವಯಸ್ಸಿನಲ್ಲಿ ಪ್ರಧಾನ್ ಸಾಧನೆಗೆ ಪದಗಳೇ ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್ನ ಆದೇಶದಂತೆ ಅಧ್ಯಯನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅವರನ್ನು ವೈದ್ಯಕೀಯವಾಗಿ ಅರ್ಹರೆಂದು ಹೇಳಲಾಗಿದ್ದು ಕೆಲವು ದಾಖಲೆಗಳ ಪರಿಶೀಲನೆಗಾಗಿ ಮತ್ತು ಸಹಿ ಹಾಕಿ ಕೋರ್ಸ್ಗೆ ಸೇರಲು ಹೇಳಲಾಗಿದೆ ಎಂದು ಮಿಶ್ರಾ ಹೇಳಿದರು.
ನಾನು ಅವರನ್ನು ಸಹಪಾಠಿ ಎಂದು ಪರಿಗಣಿಸುತ್ತೇನೆ. ನನಗೆ ಹೊಸ ರೀತಿಯ ಅನುಭವಾಗಿದೆ ಅವರ ಮಿದುಳುಗಳು ವೈದ್ಯಕೀಯ ಅಧ್ಯನಕ್ಕಾಗಿ ಸಿದ್ಧವಾಗಿರುವುದರಿಂದಾಗಿ ಅವರಿಗೆ ಯಾವುದೇ ಸಮಸ್ಯೆ ಕಾಡಲಾರದು ಎಂದು ಸಂತಸ ಹಂಚಿಕೊಂಡರು.