ಚಿಕ್ಕಮಗಳೂರು: ನಿಸರ್ಗ ಚಂಡಮಾರುತದ ಎಫೆಕ್ಟ್ ಜಿಲ್ಲೆಗೆ ಮಳೆ ಮೂಲಕ ಅಷ್ಟಾಗಿ ತೊಂದರೆಯಾಗದಿದ್ದರೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೀಸಿದ ಭಾರೀ ಗಾಳಿಗೆ ಜನ ಆತಂಕಕ್ಕೀಡಾಗಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು ಹಾಗೂ ಕಳಸದಲ್ಲಿ ಭಾರೀ ಗಾಳಿಯೊಂದಿಗೆ ಸಾಧಾರಣ ಮಳೆ ಸುರಿದಿದೆ. ಮಲೆನಾಡಿನ ಕೆಲ ಭಾಗದಲ್ಲಿ ಕಳೆದ ರಾತ್ರಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಇಂದು ಬೆಳಗ್ಗೆಯಿಂದಲೂ ಸಾಧಾರಣ ಮಳೆಯಾಗಿದೆ. ನಿಸರ್ಗ ಚಂಡಮಾರುತದ ಎಫೆಕ್ಟ್ ನಿಂದ ಜಿಲ್ಲಾದ್ಯಂತ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು ಕೆಲ ಭಾಗದಲ್ಲಿ ತುಂತುರು ಮಳೆಯಾಗಿದೆ.
Advertisement
Advertisement
ಭಾರೀ ಗಾಳಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ-ಅಣಜೂರು ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲಕಾಲ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ರಿಂದ ಕಂಬವೂ ಮುರಿದು ಬಿದ್ದು ವಿದ್ಯುತ್ ತಂತಿಗಳು ಹರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಹತ್ತಾರು ವಾಹನಗಳು ನಿಂತಲ್ಲೇ ನಿಂತಿದ್ದವು.
Advertisement
ಅಂತಿಮವಾಗಿ ಸ್ಥಳಿಯರೇ ಕಾರ್ಯಚರಣೆ ನಡೆಸಿ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಮಲೆನಾಡಲ್ಲಿ ತಣ್ಣನೆಯ ಭಾರೀ ಗಾಳಿ ಮಳೆಗಾಲದ ಆರಂಭದ ಮುನ್ಸೂಚನೆ ನೀಡಿದೆ.