ರಾಯಚೂರು: ಜಿಲ್ಲೆ ಇಡೀ ರಾಜ್ಯಕ್ಕೆ ಬೆಳಕು ನೀಡುವ ಜೊತೆಗೆ ಕೋಟೆಕೊತ್ತಲುಗಳಿಂದಲೂ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ನಗರದ ಎರಡು ಸುತ್ತಿನ ಕೋಟೆಯನ್ನೇ ಶಿಥಿಲಾವಸ್ಥೆಗೆ ತಂದಿದೆ. ಐತಿಹಾಸಿಕ ಪ್ರಸಿದ್ಧ ಪಂಚ್ ಬೀವಿ ಪಹಾಡ್ ಸ್ಮಾರಕ ಮಳೆಗೆ ಕುಸಿದು ಬಿದ್ದಿದೆ. ಕೋಟೆ ಕೆಳಗೆ ಬದುಕುತ್ತಿರುವ ಹತ್ತಾರು ಕುಟುಂಬಗಳು ಈಗ ಜೀವ ಭಯದಲ್ಲಿವೆ.
Advertisement
ನಗರದ ಬಸ್ ನಿಲ್ದಾಣ ಬಳಿಯ ಬೆಟ್ಟದ ಮೇಲಿನ ಪಂಚ್ ಬೀವಿ ಪಹಾಡ್ ಸ್ಮಾರಕ ಶಿಥಿಲಗೊಂಡು ಮಹಲಿನ ಒಂದು ಭಾಗ ನಿರಂತರ ಮಳೆಗೆ ಬಿದ್ದಿದೆ. ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯದಿಂದ ರಾಯಚೂರು ಕೋಟೆ ಹಾಗೂ ಇಲ್ಲಿನ ಸ್ಮಾರಕಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಕೋಟೆ ಭಾಗಗಳು ಬೀಳುತ್ತಿವೆ. ಕೋಟೆಯ ಕೆಳಭಾಗದಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ. ಕೋಟೆ ಹಾಗು ಗುಡ್ಡದ ಕಲ್ಲುಗಳು ಮತ್ತೆ ಬಿದ್ದರೆ ದೊಡ್ಡ ಅನಾಹುತವಾಗುವ ಸಂಭವವಿದೆ. ಕೋಟೆ ಕುಸಿದು ಬೀಳಲು ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಮುತುವರ್ಜಿ ವಹಿಸಿ ಕೋಟೆ ಹಾಗೂ ಕೋಟೆ ಕೆಳಗಿನ ಜನರನ್ನು ರಕ್ಷಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
Advertisement
ಬದಾಮಿ ಚಾಲುಕ್ಯರ ಕಾಲದಲ್ಲಿ ರಾಯಚೂರಿನಲ್ಲಿ ಸುಂದರವಾದ ಕೋಟೆ ನಿರ್ಮಾಣ ನಡೆದಿದೆ. ಕಾಕತೀಯ ರುದ್ರಾಂಭಾ ಕೋಟೆ ನಿರ್ಮಿಸಿದ್ದಾರೆ. ಈ ಕೋಟೆಗೆ ಶ್ರೀಕೃಷ್ಣದೇವರಾಯ ಕಾಲದಲ್ಲಿ ವಿಜಯದ ಸಂಕೇತವಾಗಿ ದ್ವಾರವನ್ನು ನಿರ್ಮಿಸಿದ್ದಾರೆ. ಇವರೊಂದಿಗೆ ಕಲ್ಯಾಣ ಚಾಲುಕ್ಯರು ಬಹಮನಿ ಸುಲ್ತಾನರು ಆದಿಲ್ ಷಾ, ನಿಜಾಂರ ಹೀಗೆ ಅನೇಕರು ಕೋಟೆಯನ್ನು ಆಳಿದ್ದಾರೆ. ಇಲ್ಲಿಯ ಗುಬ್ಬೇರು ಬೆಟ್ಟದಲ್ಲಿರುವ ರಾಯಚೂರು ಕೋಟೆ ನಗರದ ಪ್ರಮುಖ ಸ್ಥಳಗಳಲ್ಲಿ ಸುತ್ತುವರಿದಿದೆ. ಆದರೆ ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟೆ ಶಿಥಿಲಾವಸ್ಥೆಗೆ ತಲುಪಿ ಬೀಳುತ್ತಿದೆ. ನಿರಂತರವಾಗಿ ಸುರಿದ ಮಳೆಗೆ ಎರಡು ಕಡೆಗಳಲ್ಲಿ ಐತಿಹಾಸಿಕ ಸ್ಮಾರಕ ಹಾಗೂ ಕೋಟೆ ಕುಸಿದಿದೆ.
Advertisement
ಈ ಬಾರಿಯ ಅತಿವೃಷ್ಠಿ ನೂರಾರು ವರ್ಷಗಳಿಂದ ಭದ್ರವಾಗಿ ನಿಂತಿದ್ದ ಕೋಟೆಯನ್ನೇ ಅಲುಗಾಡಿಸಿದೆ. ಭವ್ಯ ಪರಂಪರೆಯನ್ನು ಸಾರುತ್ತಿದ್ದ ಸ್ಮಾರಕವನ್ನು ಭಾಗಶಃ ಕುಸಿದಿದೆ. ಕನಿಷ್ಠ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಎಚ್ಚೆತ್ತರೆ ಐತಿಹಾಸಿಕ ಕುರುಹುಗಳನ್ನ ಸಂರಕ್ಷಿಸಬಹುದಾಗಿದೆ. ಅಲ್ಲದೆ ಕೋಟೆ ಕೆಳಗೆ ಬದುಕುತ್ತಿರುವ ಜನರ ನೆಮ್ಮದಿಯನ್ನೂ ಉಳಿಸಬಹುದಾಗಿದೆ.