– ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆಗಳಿಂದ ದಾಳಿ
– ದೂರು ನೀಡಿದ ಇನ್ಸ್ ಪೆಕ್ಟರ್ ಕೇಶವಮೂರ್ತಿ
ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರೂ ದೂರುಗಳ ಮೇಲೆ ದೂರು ದಾಖಲಾಗುತ್ತಿದ್ದು, ಡಿಜೆ ಹಳ್ಳಿ ಇನ್ಸ್ ಪೆಕ್ಟರ್ ಕೇಶವಮೂರ್ತಿ ಸೇರಿ ಒಟ್ಟು 12 ಎಫ್ಐಆರ್ ದಾಖಲಾಗಿದೆ.
ಇನ್ಸ್ ಪೆಕ್ಟರ್ ಕೇಶವಮೂರ್ತಿಯವರು ತಮ್ಮ ದೂರಿನಲ್ಲಿ ಘಟನೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಎಫ್ಐಆರ್ ನಲ್ಲಿ ಗಲಭೆ ಕುರಿತು ವಿವರಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 307, 436, 353, 332, 333, 427, 504, 506, 149, 34 ಅಡಿ ಅಲ್ಲದೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿ, ಪಾಸ್ತಿ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Advertisement
Advertisement
ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎನ್.ಎನ್.ಕೇಶವಮೂರ್ತಿ ಈ ಕುರಿತು ವಿವರಿಸಿದ್ದು, ಪೊಲೀಸರನ್ನು ಕೊಲ್ಲಿ, ಬಿಡಬೇಡಿ ಅವರನ್ನು, ಮುಗಿಸಿಬಿಡಿ, ಒಬ್ಬರನ್ನೂ ಬಿಡಬೇಡಿ ಎಂದು ಕಿರುಚುತ್ತಿದ್ದರು. ಐವರು ಆರೋಪಿಗಳು ದೊಂಬಿಗೆ ಪ್ರಚೋದನೆ ನೀಡಿದ್ದು, ತಮ್ಮ ಆಕ್ರೋಶಭರಿತ ಹೇಳಿಕೆಗಳಿಂದ 300ಕ್ಕೂ ಹೆಚ್ಚು ಉದ್ರಿಕ್ತರನ್ನು ಪ್ರಚೋದಿಸುತ್ತಿದ್ದರು ಎಂದು ಅವರು ದೂರು ನೀಡಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಎ1 ಆರೋಪಿ ಅಫ್ನಾನ್, ಎ2 ಆರೋಪಿ ಮುಜಾಮಿಲ್ ಪಾಷಾ, ಎ3 ಸೈಯದ್ ಮಸೂದ್, ಎ4 ಮತ್ತು ಎ5 ಆರೋಪಿ ಅಲ್ಲಾ ಬಕಾಶ್ ಪ್ರಚೋದನೆ ನೀಡಿದ್ದು, ಇವರ ಹಿಂಬಾಲಕರಾದ 200-300 ಜನ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿನ್ನು ಸಾಯಿಸಬೇಕು, ಠಾಣೆಗೆ ಹಾನಿಯನ್ನುಂಟು ಮಾಡಬೇಕು ಎಂಬ ಉದ್ದೇಶದಿಂದ 300ಕ್ಕೂ ಹೆಚ್ಚು ಜನರ ಅಕ್ರಮ ಕೂಟ ರಚಿಸಿಕೊಂಡು ಮಚ್ಚು, ಲಾಂಗ್, ದೊಣ್ಣೆ, ರಾಡ್, ಕಲ್ಲು, ಇಟ್ಟಿಗೆ ಗಳನ್ನು ಹಿಡಿದು ಪೊಲೀಸರ ಮೇಲೆ ಪ್ರಹಾರ ಮಾಡಿದ್ದಾರೆ. ಅಲ್ಲದೆ ಅನುಮಾನ ಬಾರದಂತೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸುತ್ತುವರಿದಿದ್ದ ಗ್ಯಾಂಗ್, ಠಾಣೆಯ ಕಿಟಕಿ, ಬಾಗಿಲು ಜಖಂ ಗೊಳಿಸಿ, ಬೇಸ್ ಮೆಂಟ್ ನಲ್ಲಿದ್ದ ವಾಹನಗಳಿಗೆ ಬೆಂಕಿ ಹಾದ್ದಾರೆ.
Advertisement
ಪೊಲೀಸ್ ಠಾಣೆ ಸುತ್ತ 144 ಸೆಕ್ಷನ್ ಹಾಕಲಾಗಿದೆ. ಈ ಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಸೂಚನೆ ನೀಡದರೂ, ಡೋಂಟ್ ಕೇರ್ ಎಂದು ಪೊಲೀಸರು ಮತ್ತು ಠಾಣೆಯನ್ನು ಮುಗಿಸಿ ಬಿಡುತ್ತೇವೆ ಎಂದು ಕೂಗೂತ್ತ ಠಾಣೆ ಹಾಗೂ ನಮ್ಮ ಮೇಲೆ ದಾಳಿ ಮಾಡಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಶ್ರೀಧರ್ ಎಚ್.ಸಿ.ಅವರ ತಲೆಗೆ ಕಲ್ಲು ತಗುಲ್ಲಿದ್ದು, ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಅಧಿಕಾರಿ ಕೂಡಲೇ ಮೇಲಾಧಿಕಾರಿಗೆ ತಿಳಿಸಿ, ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ನಂತರ ಸೇರಿದ್ದ ಗುಂಪನ್ನು ಚದುರಿ ಹೋಗುವಂತೆ ಹಾಗೂ ಶಾಂತಿ ಕಾಪಾಡುವಂತೆ ಹೇಳಿದ್ದಾರೆ. ಆರೋಪಿಗಳು ಅವರ ಮಾತನ್ನು ಕೇಳದೆ ಪೊಲೀಸ್ ಠಾಣೆಯ ಒಳಗೆ ಹಾಗೂ ಹೊರಗೆ ನಿಂತಿದ್ದ ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಲಪ್ರಯೋಗ ಮಾಡಬೇಕಾಗುತ್ತದೆ ಎಂದರೂ ಕೇಳದ ಗುಂಪು, ಸಿಎಆರ್ ಪಡೆಯ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ದಾಳಿಗೆ ಮುಂದಾಯಿತು. ಇನ್ಸ್ಪೆಕ್ಟರ್ ಆಗಲಿ, ಸಿಬ್ಬಂದಿಯಾಗಲಿ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸ ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿದ್ದರು. ತಕ್ಷಣವೇ ಸಿಬ್ಬಂದಿ ಲಾಠಿ ಪ್ರಹಾರ ಮಾಡಿದ್ದು, ಈ ವೇಳೇ ಸಿಬ್ಬಂದಿ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ತೂರಿದ್ದಾರೆ. ಈ ವೇಳೆ ಅಶ್ರುವಾಯುವನ್ನು ಸಿಡಿಸಲಾಗಿದ್ದು, ಇಷ್ಟಾದರೂ ಆರೋಪಿಗಳು ಪೊಲೀಸರನ್ನು ಮುಗಿಸಿಯೇ ತೀರುತ್ತೇವೆ ಎಂದು ಜೋರಾಗಿ ಅರಚಾಡುತ್ತ, ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬಳಿ ಇದ್ದ ಶಸ್ತ್ರಾಸ್ತ್ರಗೋಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದರೆ, ಜೀವಕ್ಕೆ ಅಪಾಯವನ್ನುಂಟುಮಾಡಿದರೆ ತೀವ್ರ ಬಲಪ್ರಯೋಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇಷ್ಟಾದರೂ ನಿಮ್ಮಿಂದ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಾವು ಉದ್ದೇಶಿಸಿದ ಕೆಲಸವನ್ನು ಮಾಡಿಯೇ ತೀರುತ್ತೇವೆ ಎಂದು ಠಾಣೆಗೆ ನುಗ್ಗಿದ್ದಾರೆ.
ಠಾಣೆಯ ಸಿಬ್ಬಂದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉದ್ರಿಕ್ತರು ಠಾಣೆಯ ಒಳಗೆ ನುಗ್ಗಿದ್ದು, ಸಿಬ್ಬಂದಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿ, ಠಾಣೆಯನ್ನು ಸಂಪೂರ್ಣ ಧ್ವಂಸ ಮಾಡಲು ಮುಂದಾಗಿದ್ದಾರೆ. ಆಗ ಅನಿವಾರ್ಯವಾಗಿ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದನ್ನು ಲೆಕ್ಕಿಸದ ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್ ಮತ್ತು ಅಲ್ಲಾ ಬಕಾಶ್ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು, ನನ್ನನ್ನು ಹಾಗೂ ಠಾನೆಯ ಸಿಬ್ಬಂದಿಯನ್ನು ಕೊಲ್ಲಲು ಯತ್ನಿಸಿದ್ದಾರೆ.
ಕೊನೆಗೆ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ ಇಲ್ಲಿಂದ ಚದುರಿ ಪ್ರಾಣಾಪಾಯವಾಗಬಹುದೆಂದು ಹೇಳಿದರೂ ಸೇರಿದ್ದ ಜನ ಮಾತು ಕೇಳಲಿಲ್ಲ. ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದರು. ಆಗ ಮತ್ತೆ ಹಲವು ಸುತ್ತು ಗುಂಡು ಹಾರಿಸಲು ಪ್ರಾರಂಭಿಸಿದೆವು. ಆಗ ಕೆಲವು ಜನರಿಗೆ ತಾಗಿದ್ದರಿಂದ ಸ್ಥಳದಲ್ಲಿದ್ದ ಜನ ದಿಕ್ಕಾಪಾಲಾಗಿದ್ದಾರೆ. ಆಗ ಕೆಳಗೆ ಬಿದ್ದ ಕೆಲ ಜನರಿಗೆ ಗಾಯವಾಗಿದೆ. ಆಗ ನಾನು ಹಾಗೂ ಸಿಬ್ಬಂದಿ ಐವರು ಪ್ರಮುಖ ಆರೋಪಿಗಳನ್ನು ಹಾಗೂ ಅವರೊಂದಿಗಿದ್ದ 10 ಜನರನ್ನು ಘೇರಾವ್ ಮಾಡಿ ವಶಕ್ಕೆ ಪಡೆದೆವು. ಈ ವೇಳೆಯೂ ಐವರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡು ಹೋಗಲು ನನ್ನ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.
ಅಷ್ಟರಲ್ಲಾಗಲೇ ಪೊಲೀಸರ ಸಂಖ್ಯೆ ಹೆಚ್ಚಾಗಿದ್ದರಿಂದ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆಗ ಈ ಐವರನ್ನು ವಶಕ್ಕೆ ಪಡೆದು ಠಾಣೆಯಲ್ಲಿರಿಸಿದೆವು. ಆಗ ಪರಿಸ್ಥಿತಿ ಹತೋಟಿಗೆ ಬಂದಿತು. ಇದೀಗ ಇವರ ವಿರುದ್ಧ ಸರ್ಕಾರದ ಪರವಾಗಿ ದೂರು ಸಲ್ಲಿಸುತ್ತಿದ್ದೇನೆ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.