ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದೂಡುವುದರಿಂದ ಯಾವುದೇ ಪ್ರಯೋಜನವಿಲ್ಲ, ನಿಗದಿಯಾದ ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ ನಡೆಸಿದರೆ ಮಕ್ಕಳ ಕಲಿಕೆ ಹಾಗೂ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡದೇ ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು ಎಂದು ಒತ್ತಾಯಿಸಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
Advertisement
ಸಿಬಿಎಸ್ಇ ಪಠ್ಯಕ್ರಮ ಹಾಗೂ ಕೇಂದ್ರಿಯ ವಿದ್ಯಾಲಯಗಳಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಮಾಡುವ ಒತ್ತಡ ಏಕೆ? ಎಂದು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಪ್ರಮುಖ ಹಂತಗಳ ಪರೀಕ್ಷೆಗಳಿಗೆ ವ್ಯತ್ಯಯ ಉಂಟಾಗಬಾರದು. ಕರ್ನಾಟಕ ಮಾಧ್ಯಮಿಕ ಪರೀಕ್ಷಾ ಮಂಡಳಿಯು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಅದರಂತೆ ಪರೀಕ್ಷೆಗಳು ರಾಜ್ಯದಲ್ಲಿ ನಡೆಯಲಿ ಎಂದರು.
Advertisement
ಕಳೆದ ವರ್ಷದಂತೆ ಈ ವರ್ಷವೂ ಎಸ್ಎಲ್ಎಲ್ಸಿ ಪರೀಕ್ಷೆ ನಡೆಸುವುದು ಸೂಕ್ತ. ಪರೀಕ್ಷೆಗಳನ್ನು ಮುಂದೂಡಿದರೆ ಮಕ್ಕಳು ಕಲಿಕೆಯಿಂದ ದೂರ ಸರಿಯುತ್ತಾರೆ. ಕಲಿಕೆಯ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುವಂತಾಗುತ್ತದೆ. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ಕೇಂದ್ರೀಕೃತವಾಗಿರುತ್ತದೆ. ಪರೀಕ್ಷೆಗಳನ್ನು ಕೋವಿಡ್-19ರ ಎಲ್ಲಾ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಿ ನಡೆಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
Advertisement
Advertisement
ಸರ್ಕಾರ ಈ ನಿಟ್ಟಿನಲ್ಲಿ ಮಕ್ಕಳನ್ನು ಸಂರಕ್ಷಿಸಲು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸುರಕ್ಷತಾ ಕ್ರಮ ಜಾರಿಗೊಳಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಚಿವರು ನಿರ್ಧಾರ ತೆಗೆದುಕೊಂಡು ನಿಯಮಗಳ ಪ್ರಕಾರ ಪರೀಕ್ಷೆ ನಡೆಸಬೇಕು. ಮಕ್ಕಳ ಹಿತದೃಷ್ಟಿಯಿಂದ ಚಿಂತನೆ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಹೊಣೆ ಹಾಗೂ ಜವಾಬ್ದಾರಿಯಾಗಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ನಕಾರಾತ್ಮಕ ಆಲೋಚನೆಗಳಿಗೆ ಮಣಿಯದೇ, ನಿಯಮಾನುಸಾರ ನಿಗದಿಯಂತೆ ಪರೀಕ್ಷೆ ನಡೆಸಬೇಕೆಂದು ಬಸವರಾಜ ಹೊರಟ್ಟಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.