– ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ವಿ
ಬೆಂಗಳೂರು: ನಾವು ಬಂಡಾಯ ಶಾಸಕರು ಅಲ್ಲ. ನಾವು ನಮ್ಮ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಸರ್ಕಾರದ ವಿರುದ್ಧ ಬಂಡಾಯ ಎದ್ದು, ಸಭೆ ಮಾಡಲು ಹೋಗಿರಲಿಲ್ಲ. ಲಾಕ್ಡೌನ್ನಿಂದ ಹೋಟೆಲ್ ಬಂದ್ ಆಗಿ ರೊಟ್ಟಿ ತಿನ್ನಲು ಆಗಿರಲ್ಲಿಲ್ಲ. ಆದ್ದರಿಂದ ಉಮೇಶ್ ಕತ್ತಿ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು. ಅಲ್ಲಿ ಮಾವಿನ ಹಣ್ಣು ತಿಂದು ಲೋಕಾಭಿರಾಮವಾಗಿ ಮಾತಾಡಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ನಮಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ಆ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಮನೆಯಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ಸರ್ಕಾರ ಕೆಡುವುವ ಕೆಲಸ ಯತ್ನಾಳ್ ಮಾಡುವುದಿಲ್ಲ. ಇನ್ನೂ ಉಳಿದ ವರ್ಷ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ನಾವು ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ನಮಗೆ ಮಾತನಾಡಲು ಮುಕ್ತವಾದ ಸ್ವಾತಂತ್ರ ಇದೆ ಎಂದು ಯತ್ನಾಳ್ ತಿಳಿಸಿದ್ದಾರೆ.
Advertisement
Advertisement
ನಾನು ಯಾವುದೇ ವಿಚಾರವಾಗಿ ಮಾತನಾಡಲು ಭಯಪಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಬಿಎಸ್ವೈ ಇಳಿಸುವ ಕೆಲಸ ನಾವು ಮಾಡಿಲ್ಲ. ಈ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಈ ಸಭೆಯಲ್ಲಿ ಅಭಿವೃದ್ಧಿ ವಿಚಾರ ಚರ್ಚೆ ಆಗಿದೆ. ಕ್ಷೇತ್ರದ ವಿಚಾರ ಚರ್ಚೆ ಆಗಿದೆ. ಕೊರೊನಾದಲ್ಲಿ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಸಣ್ಣ ಪುಟ್ಟ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇವೆ ಎಂದರು.
ಇದೇ ವೇಳೆ ಉಮೇಶ್ ಕತ್ತಿ ಅವರ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದು, ಈ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದರ ಬಗ್ಗೆ ನಾವು ಮಾತನಾಡಲ್ಲ ಎಂದು ಯತ್ನಾಳ್ ಹೇಳಿದ್ದಾರೆ.