ಉಡುಪಿ: ಕೊರೊನಾ ಸೋಂಕಿತರು, ಸೋಂಕಿನಿಂದ ಗುಣಮುಖರಾದವರು ಚಂದ್ರಗ್ರಹಣ ಸಂದರ್ಭದಲ್ಲಿ ಉಪವಾಸ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ನೀವು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ವೈದ್ಯರು ಹೇಳಿದ್ದನ್ನು ಮಾಡಿ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದ್ದಾರೆ.
ಮೇ 16 ರಂದು ಪೂರ್ಣ ಅಥವಾ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 3:14 ರಿಂದ 6:23 ರವರೆಗೆ ಗ್ರಹಣ ಗೋಚರ ಕಾಲವಾಗಿದ್ದು,ಸೂರ್ಯಾಸ್ತಮಾನಕ್ಕೆ ಮೊದಲು ಗ್ರಹಣ ಗೋಚರ ಆಗಲಿದೆ. ಇದು ವೃಶ್ಚಿಕ ರಾಶಿಯಲ್ಲಿ ಬರುವಂತಹ ಕೇತು ಗ್ರಹಣ. ಹೀಗಾಗಿ ವೃಶ್ಚಿಕ ರಾಶಿಯವರು ಜಪ ತಪ ಧ್ಯಾನ ಮಾಡಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದರು.
Advertisement
ಕರ್ನಾಟಕದ ಯಾವುದೇ ಭಾಗದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ. ಗ್ರಹಣ ಗೋಚರ ಆಗದೇ ಇದ್ದರೆ ಆಚರಣೆ ಮಾಡಬೇಕೆಂದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಗ್ರಹಣ ಬರುವುದು ನಮ್ಮದೇ ಚಂದ್ರನಿಗೆ. ಅದೇ ಚಂದ್ರನು ದುರ್ಬಲವಾಗುವ ಕಾಲವನ್ನು ಗ್ರಹಣ ಅಂತಾರೆ, ಅದೇ ಚಂದ್ರ ನಮಗೂ ಕಣ್ಣಿಗೆ ಕಾಣುವುದರಿಂದ ಆಚರಣೆ ಮಾಡಬೇಕೋ ಬೇಡವೋ ಎನ್ನುವ ಜಿಜ್ಞಾಸೆಯೂ ಇದೆ.
Advertisement
Advertisement
ಗ್ರಹಣ ಗೋಚರವಿಲ್ಲ- ಉಪವಾಸ ಅಗತ್ಯ ಇಲ್ಲ: ನಮಗೆ ಗ್ರಹಣ ಗೋಚರವಾದಾಗ ಮಾಡುವ ಎಲ್ಲಾ ಆಚರಣೆಗಳನ್ನು ಈ ಬಾರಿ ಮಾಡಬೇಕೆಂದಿಲ್ಲ. ಸಂಜೆ ಗ್ರಹಣ ಪ್ರಾರಂಭ ಆಗುವ 3:14 ರಿಂದ 6:10 ರವರೆಗೆ ಆಹಾರ ನಿಷೇಧ ಮಾಡಿದರೆ ಸಾಕು. ರೋಗಿಗಳು, ಮಕ್ಕಳಿಗೆ ವಿನಾಯಿತಿ ಇದೆ. ಅವರು ಕಡಿಮೆ ಪ್ರಮಾಣದ ಆಹಾರ ಸೇವಿಸಿದರೆ ಉತ್ತಮ. ಇದರಿಂದ ಗ್ರಹಣದಿಂದ ಬರಬಹುದಾದ ದೈಹಿಕ ದುರ್ಬಲತೆಯಿಂದ ಪಾರಾಗಬಹುದು ಎಂದು ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದರು.
Advertisement
ಬೇರೆ ಬೇರೆ ಗ್ರಹಗಳಿಂದ ಬರುವ ಕಿರಣಗಳಿಂದಲೂ ನಮ್ಮ ದೇಹದ ರೋಗನಿರೋಧಕ ಶಕ್ತಿ ನಿರ್ಧಾರವಾಗುತ್ತದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಆಹಾರ ಸ್ವೀಕರಿಸದೇ ಇರುವುದು ಒಳ್ಳೆಯದು. ನಮಗೆ ಗ್ರಹಣ ಗೋಚರ ಆಗೋದಿಲ್ಲ. ಆದರೆ ಪೂರ್ವ ದೇಶದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಕ್ಕೆ ಬರುತ್ತದೆ. ಕೊನೆಯ ಮೂರ್ನಾಲ್ಕು ನಿಮಿಷ ಭಾರತದ ಕೆಲವೆಡೆ ಕಾಣಬಹುದು. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಚಂದ್ರನ ಆರಾಧನೆ ಮಾಡುವ ಕಾರಣ ಮತ್ತು ಚಂದನಿಗೆ ಸಂಬಂಧಿಸಿದ ಅಧಿದೇವತೆಗಳನ್ನು ಕಾಡುವ ಕಾರಣ ಆ ಹೊತ್ತು ಆಹಾರವನ್ನು ಬಿಟ್ಟು ಉಪವಾಸ ಇರಬೇಕು.
ಗ್ರಹಣ ಮೋಕ್ಷ ಆದ ನಂತರ ಸ್ನಾನ ಮಾಡಿ ನಿತ್ಯಕರ್ಮ ಮಾಡುವುದು ಉತ್ತಮ. ಯಾವ ಗ್ರಹಣದಿಂದಾಗಿ ಯಾವ ರಾಶಿಗೂ ಅನಿಷ್ಟ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಅನಾಚಾರ ಮಾಡಿದರೆ ಖಂಡಿತವಾಗಿ ಸಮಸ್ಯೆ ಬರುತ್ತದೆ. ವೃಶ್ಚಿಕ ರಾಶಿಗೆ ಈ ಬಾರಿ ಗ್ರಹಣ ಬರುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಸಣ್ಣ ಏರು-ಪೇರು ಬರಬಹುದು, ಈಗಾಗಲೇ ವಾತಾವರಣದಲ್ಲಿ ಕೊರೊನಾ ಮಹಾಮಾರಿ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕು. ಗ್ರಹಣಕಾಲದಲ್ಲಿ ಉಪವಾಸ ಇರುವುದೇ ಉತ್ತಮ ಪರಿಹಾರ.
ಕೆಲವರು ಜಪ, ಹೋಮಗಳನ್ನು ಮಾಡುತ್ತಾರೆ. ಇದೇನು ಕಡ್ಡಾಯ ಅಲ್ಲ. ಬೇಕೆನಿಸಿದರಷ್ಟೇ ಮಾಡಿಕೊಳ್ಳಬಹುದು. ಗ್ರಹಣ ಬಂದಾಗ ಮನಃಕಾರಕ ಚಂದ್ರನು ಮಾನಸಿಕ ಖಿನ್ನತೆ ವಿಕೃತಿಗಳಿಗೆ ಕಾರಣನಾಗುತ್ತಾನೆ. ಗ್ರಹಣದ ಪ್ರಭಾವ ಜಾಸ್ತಿ ಇರುವ ಸ್ಥಳಗಳಲ್ಲಿ ವ್ಯಕ್ತಿಗಳ ಮೇಲೆ ಮಾನಸಿಕ ಪರಿಣಾಮ ಇರುತ್ತದೆ. ಚೀನಾದ ಪೂರ್ವ ಭಾಗ ಮಲೇಶಿಯಾ ಇಂಡೋನೇಶಿಯಾ ಜಪಾನ್ ಮುಂತಾದ ಭಾಗಗಳಲ್ಲಿ ಗ್ರಹಣದ ಪರಿಣಾಮ ಜಾಸ್ತಿ. ಪ್ರಕೃತಿಯ ಮೇಲೂ ತೊಂದರೆಗಳಾಗಬಹುದು. ಸಮುದ್ರದ ಅಲೆ ಭೂಕಂಪನ ಇತ್ಯಾದಿಗಳು ಆಗಬಹುದು. ಚಂಡ ಮಾರುತಗಳು ಬರಬಹುದು, ಅಲೆ ಹೆಚ್ಚಾಗಬಹುದು.
ಮನುಷ್ಯನ ಬುದ್ಧಿಯ ಮೇಲೆ ಪರಿಣಾಮ ಬೀರಬಹುದು. ಲಾಕ್‍ಡೌನ್ ಮಾಡಿದ ನಂತರ ಬಹಳ ಜನರು ಓಡಾಡುತ್ತಿಲ್ಲವೇ, ನಾನು ಓಡಾಡಿದರೆ ನನಗೇನು ಆಗಲ್ಲ ಅಂತಾರೆ. ಕೇವಲ ಪ್ರಜೆಗಳು ಮಾತ್ರವಲ್ಲ ರಾಜರಿಗೂ ತೊಂದರೆಗಳು ಬರುತ್ತವೆ. ಆಡಳಿತ ಮಾಡುವ ರಾಜರಿಗೆ ತೊಂದರೆ ಬಂದರೆ ದೇಶಕ್ಕೆ ತೊಂದರೆ. ರಾಜಕೀಯದಲ್ಲಿ ಹೊಡೆದಾಟಗಳು ಪೀಠಕ್ಕಾಗಿ ಕಾದಾಟ ನಡೆಯಬಹುದು. ಮುಂಜಾಗ್ರತೆ ವಹಿಸಿ.
ಭಾರತಕ್ಕೆ ಗ್ರಹಣದ ಪ್ರಭಾವ ಕಡಿಮೆ: ಚೈನಾದಲ್ಲಿ ಉಂಟಾದ ವೈರಸ್ ಭಾರತವನ್ನು ಕಾಡಿದ ರೀತಿಯಲ್ಲಿ ಅನ್ಯ ದೇಶಗಳ ಮೇಲೆ ಉಂಟಾಗುವ ತೊಂದರೆ ಭಾರತಕ್ಕೂ ಬರುತ್ತದೆ. ಆದರೆ ನೇರವಾಗಿ ಭಾರತದ ಮೇಲೆ, ಭಾರತೀಯರ ಮೇಲೆ ಬೀರುವ ಸಾಧ್ಯತೆ ಕಂಡು ಬರುತ್ತದೆ. ಭಾರತೀಯರು ಎಚ್ಚರದಿಂದ ಇರಬೇಕು ಎಂದು ಅಮ್ಮಣ್ಣಾಯ ಹೇಳಿದರು.