-ಸರ್ಕಾರ ಅಂದ್ಮೇಲೆ ಅಸಮಾಧಾನ ಇದ್ದೆ ಇರುತ್ತೆ
ಬೆಂಗಳೂರು: ನಾನೇನು ಸನ್ಯಾಸಿ ಅಲ್ಲ. ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ ಎಂದು ಶಾಸಕ ಮುರುಗೇಶ್ ನಿರಾಣಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುರುಗೇಶ್ ನಿರಾಣಿ, ನಾನು ಅಸಮಾಧಾನಿತರ ನೇತೃತ್ವ ವಹಿಸಿದ್ದೇನೆ ಎನ್ನುವುದು ಸುಳ್ಳು. ಕಳೆದ ಎರಡು ತಿಂಗಳಿಂದ ನಾನು ಯಾರೊಂದಿಗೂ ಕೂಡಿಲ್ಲ, ಬೆಂಗಳೂರಿಗೂ ಬಂದಿಲ್ಲ. ಬಂದರೂ ಕಮಿಟಿ ಮೀಟಿಂಗ್ ಮಾಡಿದ್ದೇವೆ ಅಷ್ಟೆ, ಅದನ್ನು ಮುಗಿಸಿ ಮತ್ಯಾರನ್ನೂ ಭೇಟಿ ಮಾಡಿಲ್ಲ. ತಪ್ಪು ಮಾಹಿತಿ ನೀಡಲಾಗಿದೆ. ಉಳಿದವರ ಬಗ್ಗೆ ನಾವು ಮಾತನಾಡುವುದಿಲ್ಲ, ಈ ಬಗ್ಗೆ ನನಗೆ ತಿಳಿದಿಲ್ಲ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನ ಇಲ್ಲ. ನಾನು ಸ್ಟೇಬಲ್ ಆಗಿದ್ದೇನೆ. ಈ ಕುರಿತು ನಾನು ಯಾವತ್ತೂ ಬಹಿರಂಗವಾಗಿ ಹೇಳಿಲ್ಲ ಅಂದ್ರು.
Advertisement
Advertisement
ಸಿಎಂ ಮನೆಗೆ ಹೋಗಿದ್ದೆ: ಬೆಂಗಳೂರಿನಲ್ಲಿ ಸಭೆ ನಡೆದಿದೆ ಎನ್ನುವುದು ಸುಳ್ಳು. ನಾನು ಶಾಸಕರ ಭವನದಲ್ಲಿ ಕಮಿಟಿ ಮೀಟಿಂಗ್ ಮುಗಿಸಿ, ಸಿಎಂ ಮನೆ ಹಾಗೂ ಈಶ್ವರಪ್ಪನವರ ಮನೆಗೆ ತೆರಳಿ ವಾಪಸ್ ಬಂದಿದ್ದೇನೆ. ನಮ್ಮ ಜಿಲ್ಲೆಯ ಎಂಎಲ್ಸಿಗಳ ಬಗ್ಗೆ ನಾಲ್ಕು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಮನವಿ ಮಾಡಲು ಸಿಎಂ ಬಳಿ ಹೋಗಿದ್ದೆವು. ಈ ವೇಳೆಯೂ ಅಸಮಾಧಾನದ ಕುರಿತು ಚರ್ಚೆಯಾಗಿಲ್ಲ. ಎಂಎಲ್ಸಿ ಟಿಕೆಟ್ ವಿಚಾರ ಹಾಗೂ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿದ್ದೇನೆ. ಅಲ್ಲದೆ ಸರ್ಕಾರದಲ್ಲಿ ನಮ್ಮ ಕೆಲಸಗಳು ಹೆಚ್ಚು ಆಗಿವೆ ಎಂದು ಹೇಳಿದರು.
Advertisement
Advertisement
ಸನ್ಯಾಸಿ ಅಲ್ಲ: ಸಚಿವ ಸ್ಥಾನದ ಆಸೆ ಇದೆ. ನಾನೇನು ಸನ್ಯಾಸಿಯಲ್ಲ. ನಮ್ಮ ಸ್ವಾಮೀಜಿಗಳು ಕೇಳಿದ್ದೂ ತಪ್ಪಲ್ಲ. ಆದರೆ ಮುಖ್ಯಮಂತ್ರಿಗಳ ಕುರಿತು ಅಸಮಾಧಾನವಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸಿಎಂ ಬದಲಾಯಿಸುವ ಕುರಿತು ತಿಳಿದಿಲ್ಲ. ಮುಖ್ಯಮಂತ್ರಿಗಳು ಯಾರನ್ನು ಕರೆಸಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಅಸಮಾಧಾನ ಇರಬಹುದು, ಎಲ್ಲ ಸರ್ಕಾರದಲ್ಲೂ ಇದ್ದೇ ಇರುತ್ತದೆ. ಇದನ್ನು ಹೋಗಲಾಡಿಸಲು ನಮ್ಮ ಪಕ್ಷ, ಸಂಘ ಪರಿವಾರ, ಹೈ ಕಮಾಂಡ್ ಇದೆ. ಅವರೆಲ್ಲರು ಕುಳಿತು ತೀರ್ಮಾನ ಮಾಡುತ್ತಾರೆ. ಅವರು ಗುಂಪು ಸೇರಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ. ನೀವೂ ಹೇಳಿದ ಮೇಲೆ ನನಗೆ ವಿಷಯ ತಿಳಿದಿದೆ. ಹೀಗಿರುವಾಗ ಸರಿ ತಪ್ಪು ಎನ್ನುವುದನ್ನು ಹೇಗೆ ಹೇಳುವುದು ಎಂದು ಜಾರಿಕೊಂಡರು.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರಾಗಿರುವ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕ ಬಣ ರಚಿಸಿಕೊಂಡು ಸಿಎಂ ವಿರುದ್ಧದ ವೇದಿಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರು 27 ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.