– ಬೇರೆ ಕ್ಷೇತ್ರಗಳ ಕಷ್ಟ ಸಿ.ಟಿ ರವಿಗೆ ಕಾಣಲ್ಲ
– 3 ವರ್ಷದಿಂದ ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ
– ಕ್ಷೇತ್ರದಲ್ಲಿ ಏನೂ ಮಾಡದಿದ್ರೆ ಜನ ಅಪಹಾಸ್ಯ ಮಾಡ್ತಾರೆ
ಬೆಂಗಳೂರು: ನಮ್ಮನ್ನು ಬೆಂಬಲಿಸಿದರೆ ಸಿ.ಟಿ.ರವಿ ದೊಡ್ಡವರಾಗುತ್ತಿದ್ದರು ಎಂದು ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ಜಿಲ್ಲೆಗಳ ನಡುವೆ ತಾರತಮ್ಯ ಮಾಡಲಾಗಿದೆ ಎಂದು ಪ್ರತಿಭಟಿಸಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂಡಿಗೆರೆಯಲ್ಲಿ 2019ರಲ್ಲಿ ನೆರೆ ಬಂದಿತ್ತು. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡರು, ಎಷ್ಟೋ ಜನರ ಮನೆ ನಾಶವಾಯಿತು. ನೂರಾರು ಎಕರೆ ಜಮೀನನ್ನು ಜನರು ಕಳೆದುಕೊಂಡರು. ಆಗ ಯಡಿಯೂರಪ್ಪ ಅವರು ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ಅವರು ಇನ್ನೂ ಕೊಟ್ಟಿಲ್ಲ. ಎಷ್ಟೋ ಜನರು ಇನ್ನೂ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಲು ಸಹ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ ಎಂದು ನೋವಿನಲ್ಲಿ ಹೇಳಿದ್ದಾರೆ.
Advertisement
Advertisement
ಈ ನಡುವೆ ಕೊರೊನಾ ಬಂದ ಕಾರಣ ನಾವು ಸುಮ್ಮನಾಗಿದ್ದೆವು. ಆದರೆ ನಮ್ಮ ಕ್ಷೇತ್ರದಲ್ಲಿ ಜನರ ಕಷ್ಟ ನೋಡಲಾಗುತ್ತಿಲ್ಲ. ಅವರು ನಮಗೆ ಛೀಮಾರಿ ಹಾಕುತ್ತಿದ್ದಾರೆ. ಅದಕ್ಕೆ ನಾವು ಜನರಿಗಾಗಿ ಹೋರಾಟ ಮಾಡಬೇಕಾದ ಅವಶ್ಯವಿದೆ ಎಂದು ನಾನು ದನಿ ಎತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಅವರ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು.
Advertisement
Advertisement
ನಿಮ್ಮ ಸಚಿವ ಸ್ಥಾನ ತಪ್ಪಿರುವುದಕ್ಕೆ ಸಿ.ಟಿ.ರವಿ ಅವರು ಕಾರಣನಾ..? ಎಂಬುದಕ್ಕೆ ಉತ್ತರಿಸಿದ ಅವರು, ಅದು ಈಗ ಅಪ್ರಸ್ತುತವಾಗುತ್ತೆ. ನಾನು ಆ ಕುರಿತು ಏನನ್ನೂ ಮಾತನಾಡುವುದಿಲ್ಲ. ಈಗ ನನಗೆ ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ನೆರವು ಅಷ್ಟೇ ಮುಖ್ಯ. ಅದು ಅಲ್ಲದೇ ಮಂತ್ರಿಯಾಗಿ ರವಿ ಅವರು ಅನುದಾನ ಪಡೆದುಕೊಂಡಿದ್ದಾರೆ. ಅವರು ಒಂದು ಮಾತು ನಮ್ಮ ಕ್ಷೇತ್ರದ ಬಗ್ಗೆ ಹೇಳಿದ್ದರೆ ಚೆನ್ನಾಗಿರುತ್ತಿತ್ತು, ಆಗ ಅವರು ದೊಡ್ಡವರಾಗುತ್ತಿದ್ದರು. ಅವರು ನಮ್ಮ ವಿಚಾರದಲ್ಲಿ ಪೂರ್ವಾಗ್ರಹ ಪೀಡಿತರು ಎಂದು ಕುಮಾರಸ್ವಾಮಿಯವರು ಅಸಮಾಧಾನ ಹೊರಹಾಕಿದರು.
ಕ್ಷೇತ್ರದಲ್ಲಿ ಸರಿಯಾದ ನೆರವು ಸಿಗುತ್ತಿಲ್ಲ ಎನ್ನುವುದಕ್ಕೆ ಪ್ರತಿಕ್ರಿಯಿಸಿ, ನನಗೆ ಯಾವುದೇ ರೀತಿಯ ಆಸೆಗಳಿಲ್ಲ. ಯಾರ ಬಳಿಯೂ ನಾವು ಮಂತ್ರಿ, ಸಚಿವ ಸ್ಥಾನಕ್ಕಾಗಿ ಹೋಗಿ ಕೇಳಿಕೊಂಡಿಲ್ಲ. ಜನರಿಗಾಗಿ ನಾನು ನಿನ್ನೆ ಹೋರಾಟ ಮಾಡಿದ್ದೇನೆ. ಅವರಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಅನುದಾನ ಕೊಡಿ ಎಂದು ಮಾತ್ರ ನಾವು ಕೇಳಿದ್ದೇವೆ. ಇಲ್ಲವಾದರೆ ನಾವು ನಮ್ಮ ಕ್ಷೇತ್ರದಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂದಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದುಳಿದ ಏಕೈಕ ನಾಯಕರು, ಅದಕ್ಕೆ ಅವರನ್ನು ನಾನು ಭೇಟಿ ಮಾಡಿದ್ದೇನೆ. ಪ್ರತಿ ವರ್ಷ ಅವರ ಹುಟ್ಟುಹಬ್ಬದಿನ ಅವರಿಗೆ ವಿಶ್ ಮಾಡುತ್ತೇನೆ. ಪ್ರತಿ ವರ್ಷವು ಹೋಗುತ್ತೇನೆ. ಕಳೆದ ಬಾರಿಯೂ ಹೋಗಿದ್ದೆ. ಆಗ ತೊಂದರೆ ಇರಲಿಲ್ಲ, ಈಗ ಏಕೆ ಸಮಸ್ಯೆಯಾಗಿದೆ. ಅವರಿಗೆ ಪ್ರತಿ ರಾಜಕಾರಣಿಗಳು ಸಹ ಶುಭಕೋರಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಕೇಳಿದ್ದಾರೆ.
ನಿಮ್ಮದೇ ಪಕ್ಷದವರು ನಿಮ್ಮ ಮಾತಿಗೆ ಏಕೆ ಸ್ಪಂದಿಸುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಇಲ್ಲ. ನಿನ್ನೆ ಕಂದಾಯ ಮಂತ್ರಿ ಆರ್. ಅಶೋಕ್ ಮತ್ತು ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಅದಕ್ಕೆ ಇಂದು 3 ಗಂಟೆಗೆ ಹೋಗಿ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನ ಸಿಕ್ಕಿಲ್ಲದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ವಲಸಿಗರು ಬಂದಿಲ್ಲವೆಂದಿದ್ದರೆ ನಮಗೆ ಪೂರ್ಣ ಸರ್ಕಾರವೇ ಬರುತ್ತಿರಲಿಲ್ಲ. ಅವರು ಬಂದಿದ್ದು, ನಮಗೆ ಖುಷಿ ತಂದಿದೆ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಅದೇ ನಮಗೆ ಖುಷಿಯ ವಿಚಾರ. ಕ್ಷೇತ್ರಗಳ ಅಭಿವೃದ್ಧಿ ಮಾಡಲು ಸಹಾಯಕವಾಗಿದೆ. ಇದಕ್ಕಾಗಿ 3 ವರ್ಷ ಕಾಯುತ್ತಿದ್ದೆ. ಅದರೂ ನನ್ನ ಧ್ವನಿ ಅವರಿಗೆ ಕೇಳಿಸಲಿಲ್ಲವೆಂದು ಈ ಹೋರಾಟ ಮಾಡಿದೆ ಎಂದು ಎಂ.ಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ