ಚಿಕ್ಕಮಗಳೂರು: ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಉದ್ದೇಬೋರನಹಳ್ಳಿ ಸುತ್ತಮುತ್ತಲಿನ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಉದ್ದೇಬೋರನಹಳ್ಳಿಯೇ ಕೇಂದ್ರ ಸ್ಥಳವಾಗಿದೆ. ಅಂಚೆ ಕಛೇರಿ, ಬ್ಯಾಂಕ್, ಆಸ್ಪತ್ರೆ, ನ್ಯಾಯಬೆಲೆ, ಪಶು ವೈದ್ಯಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿದಿನ ನೂರಾರು ಜನ, ಮಹಿಳೆಯರು, ವಿದ್ಯಾರ್ಥಿಗಳು ಶಾಲಾ-ಕಾಲೇಜು, ವ್ಯವಹಾರಕ್ಕೆ ಉದ್ದೇಬೋರನಹಳ್ಳಿಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದರಿಂದ ನಾನಾ ರೀತಿ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಮದ್ಯದ ಅಂಗಡಿಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Advertisement
Advertisement
ಸದ್ಯಕ್ಕೆ ಗ್ರಾಮದಲ್ಲಿ ನೆಮ್ಮದಿ ಇದೆ. ಬಾರ್ ಓಪನ್ ಆಗುವುದರಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳಿಯರು ಗ್ರಾಮದ ನಿವೇಶನದಲ್ಲಿ ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನೂ ಪಡೆಯದೇ ಶೆಡ್ ನಿರ್ಮಿಸುತ್ತಿದ್ದಾರೆ. ಇದು ಮದ್ಯದ ಅಂಗಡಿ ತೆರೆಯಲು ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
Advertisement
ಈ ಹಿಂದೆ ಕೂಡ ಗ್ರಾಮದಲ್ಲಿ ಮದ್ಯದ ಅಂಗಡಿ ಇತ್ತು. ಸ್ಥಳಿಯರು ಹೋರಾಟ ಮಾಡಿ ಬೇರೆಡೆಗೆ ಸ್ಥಳಾಂತರಿಸಿದ್ದರು. ಈಗ ಮತ್ತೆ ಬಾರ್ ಪ್ರಾರಂಭಿಸಲು ಹೊರಟಿರುವುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಬಾರ್ ಅಥವಾ ಯಾವುದೇ ರೀತಿಯ ಮದ್ಯದಂಗಡಿ ಪ್ರಾರಂಭಿಸಿದರೆ ಸ್ತ್ರೀ ಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.