ತನ್ನ ನೆಚ್ಚಿನ ನಟನ ಜೊತೆ ತೆರೆಹಂಚಿಕೊಂಡು ಚಂದನವನದ ದಿಗ್ಗಜ ನಟರ ಜೊತೆ ನಟಿಸಿ ವೃತ್ತಿ, ಪ್ರವೃತ್ತಿ ಎರಡಲ್ಲೂ ಸೈ ಎನಿಸಿಕೊಂಡ ಹಿರಿಯ ನಟ, ರಂಗಕರ್ಮಿ ಶಂಕರ್ ಭಟ್ ನಾಲ್ಕು ದಶಕದ ಚಿತ್ರರಂಗದ ಯಾನದ ಬಗ್ಗೆ ನಮ್ಮೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅವರ ಮನದಾಳದ ಮಾತುಗಳು ಇಲ್ಲಿವೆ.
Advertisement
• ಚಿತ್ರರಂಗದಲ್ಲಿ ನಿಮ್ಮದು ನಾಲ್ಕು ದಶಕದ ಪಯಣ. ಕಲಾ ಬದುಕಿನ ಆರಂಭ ಹೇಗಾಯಿತು?
ನಾನು ಚಿತ್ರರಂಗಕ್ಕೆ ಬಂದು 45 ವರ್ಷಗಳು ಕಳೆದಿದೆ. ಶಾಲಾ ದಿನಗಳಲ್ಲಿ ರಾಜ್ ಕುಮಾರ್ ಸಿನಿಮಾಗಳನ್ನು ನೋಡುತ್ತಾ ಬೆಳೆದ ನನಗೆ ನಟನೆ ಬಗ್ಗೆ ಅಪಾರ ಆಸಕ್ತಿ ಬೆಳೆಯಿತು. ಬೆಂಗಳೂರಿನಲ್ಲಿ ಬಿಕಾಂ ಓದುತ್ತಿರುವಾಗ ಪ್ರಾಂಶುಪಾಲರ ಸಹಾಯದಿಂದ ನಾಟಕಗಳಲ್ಲಿ ತೊಡಗಿಕೊಂಡು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ. ನಂತರ ಹವ್ಯಾಸಿ ರಂಗಭೂಮಿಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಾ ಹೋದೆ ರಂಗಭೂಮಿ ನಂಟು ಮುಂದೆ ಸಿನಿಮಾಗಳಲ್ಲಿ ನಟಿಸಲು ದಾರಿ ಮಾಡಿಕೊಡ್ತು. ನಂತರ ಸೀರಿಯಲ್, ರಂಗಭೂಮಿ, ಜಾಹೀರಾತು ಹೀಗೆ ನಟಿಸುತ್ತಾ ಹೋದೆ. ಇಲ್ಲಿವರೆಗೂ 370 ಸಿನಿಮಾ, 3500 ಧಾರಾವಾಹಿ ,160ಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾದೇವಿಯ ಸೇವೆಯನ್ನು ಮಾಡಿದ್ದೇನೆ. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್
Advertisement
Advertisement
• ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ನಟ ಎರಡನ್ನು ಹೇಗೆ ನಿಭಾಯಿಸುತ್ತಿದ್ರಿ?
ಬಿಕಾಂ ಮುಗಿಸಿದ ನಂತರ ಯುಕೋ ಬ್ಯಾಂಕ್ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದೆ. ಬ್ಯಾಂಕ್ ಉದ್ಯೋಗದ ಜೊತೆ ಜೊತೆಗೆ ರಂಗಭೂಮಿ, ಸಿನಿಮಾ ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ನಾಲ್ಕು ವರ್ಷದ ಹಿಂದೆ ಬ್ಯಾಂಕ್ ವೃತ್ತಿಯಿಂದ ನಿವೃತ್ತಿ ಹೊಂದಿದ್ದೇನೆ. ಎರಡನ್ನೂ ಹೇಗೆ ನಿಭಾಯಿಸುತ್ತೀಯಾ ಎಂದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ರು. ಎರಡೂ ಕಡೆ ಸುಲಲಿತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ನನ್ನ ಬ್ಯಾಂಕ್ ಸಹೋದ್ಯೊಗಿಗಳಿಗೂ ಚಿತ್ರರಂಗದ ನಿರ್ದೇಶಕ ನಿರ್ಮಾಪಕರಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ.
Advertisement
• ಅಣ್ಣಾವ್ರ ಜೊತೆ ತೆರೆ ಹಂಚಿಕೊಂಡ ಅನುಭವ ಹೇಗಿತ್ತು?
ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಅವರ ನಟನೆ ನೋಡಿಯೇ ನನ್ನೊಳಗೊಬ್ಬ ಕಲಾವಿದ ಹುಟ್ಟಿಕೊಂಡಿದ್ದು, ಆದರೆ ಮುಂದೊಂದು ದಿನ ಅವರ ಜೊತೆ ನಟಿಸುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ರಂಗಭೂಮಿಯಲ್ಲಿ ನಟಿಸುತ್ತಾ ಸಿನಿಮಾ ನಂಟು ಬೆಳೆದು ಅಣ್ಣಾವ್ರ ಧ್ರುವತಾರೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ಶಬ್ದವೇದಿ ಸೇರಿದಂತೆ ಎಂಟರಿಂದ ಹತ್ತು ಸಿನಿಮಾದಲ್ಲಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ಅವರೊಬ್ಬ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಗುಣದಲ್ಲಿ ನಡತೆಯಲ್ಲಿ ಅವರು ತುಂಬಾ ಗ್ರೇಟ್. ಮೇರು ನಟ ಆಗಿದ್ದರೂ ಕೂಡ ಅವರು ಕಲಾವಿದರ ಜೊತೆ ಕಲಾವಿದರಾಗೆ ಇರುತ್ತಿದ್ರು. ಅಂತಹ ಒಬ್ಬ ವ್ಯಕ್ತಿ ಮತ್ತೆ ಹುಟ್ಟೋಕೆ ಸಾಧ್ಯವೇ ಇಲ್ಲ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್
• ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುತೇಕ ಸಿನಿಮಾದಲ್ಲಿ ನೀವು ನಟಿಸಿದ್ದೀರಿ.
ಹೌದು, ಅವರ ನಿರ್ದೇಶನದ ಗುಣ ನನಗೆ ಇಷ್ಟವಾಗುತ್ತೆ. ಕಲಾವಿದರನ್ನು ಅವರು ನಡೆಸಿಕೊಳ್ಳುವ ರೀತಿ ತುಂಬಾ ಖುಷಿ ಕೊಡುತ್ತೆ. ಉಪೇಂದ್ರ ನಿಜವಾಗಿಯೂ ರಿಯಲ್ ಸ್ಟಾರ್. ಪ್ರತಿ ದೃಶ್ಯವನ್ನು ಅವರು ನೈಜವಾಗಿ ಚಿತ್ರೀಕರಿಸಲು ಪ್ರಯತ್ನ ಪಡುತ್ತಾರೆ. ಸ್ಕ್ರಿಪ್ಟ್ ಕೊಟ್ಟು ನೀವೇ ಈ ದೃಶ್ಯಕ್ಕೆ ಅಭಿನಯಿಸಿ ಎಂದು ಕಲಾವಿದರಿಗೆ ಮುಕ್ತ ಅವಕಾಶ ನೀಡುತ್ತಾರೆ. ಅವರ ಸಿನಿಮಾಗಳಲ್ಲಿ ಕಲಾವಿದರಿಗೆ ತಮ್ಮ ಪ್ರತಿಭೆ ಹೊರಹಾಕಲು ಪೂರ್ಣ ಪ್ರಮಾಣದ ಅವಕಾಶವಿರುತ್ತೆ. ಅವರೊಬ್ಬ ಕಲಾವಿದರ ಕಲಾವಿದ. ಇದ್ರಿಂದ ಅವರ ಬಹುತೇಕ ಸಿನಿಮಾಗಳಲ್ಲಿ ನಾನು ನಟಿಸಲು ಸಾಧ್ಯವಾಯಿತು.
• ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಕಲಾವಿದರಿಗೆ ಇರುವ ಭಿನ್ನತೆಯೇನು?
ರಂಗಭೂಮಿ ಕಲಾವಿದರ ಮಾಧ್ಯಮ, ಸಿನಿಮಾ ನಿರ್ದೇಶಕನ ಮಾಧ್ಯಮ. ರಂಗಭೂಮಿಯಲ್ಲಿ ನಮ್ಮ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಹೊರ ಹಾಕಲು ಅವಕಾಶ ಇರುತ್ತೆ. ನಾವು ಮಾಡುತ್ತಿರುವ ತಪ್ಪುಗಳನ್ನು ನಮ್ಮೆದುರೆ ಇರುವ ಪ್ರೇಕ್ಷಕರ ಹಾವಭಾವದ ಮೂಲಕ ಅರಿತುಕೊಳ್ಳುತ್ತೇವೆ. ಆದರೆ ಸಿನಿಮಾದಲ್ಲಿ ಆ ರೀತಿ ಆಗೋದಿಲ್ಲ. ನಿರ್ದೇಶಕರು ಎಷ್ಟು ಹೇಳುತ್ತಾರೋ, ದೃಶ್ಯಕ್ಕೆ ಎಷ್ಟು ಬೇಕೋ ಅಷ್ಟೇ ನಟಿಸಬೇಕು. ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ಪ್ರತಿಭೆ ಬಳಸಿಕೊಳ್ಳಲು ಸಾಧ್ಯವಾಗೋದಿಲ್ಲ. ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್
• ನಾನಾ ಪಾಟೇಕರ್ ಜೊತೆ ಹಿಂದಿಯಲ್ಲಿ ನಟಿಸಿದ ಅನುಭವ ಹೇಗಿತ್ತು?
ಅರುಣ್ ಕೌಲ್ ದೀಕ್ಷಾ ಸಿನಿಮಾ ನಿರ್ದೇಶಕರು. ಚಿತ್ರದಲ್ಲಿನ ಒಂದು ಮುಖ್ಯ ಪಾತ್ರಕ್ಕೆ ಕನ್ನಡದ ಕಲಾವಿದರನ್ನು ಹುಡುಕುತಿದ್ರು. ಮೈನಾವತಿಯವರ ಪುತ್ರ ಗುರುದತ್ ನನಗೆ ಪರಿಚಯವಿದ್ದರಿಂದ ಅವರ ಮುಖಾಂತರ ದೀಕ್ಷಾ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಚಿತ್ರದಲ್ಲಿ ನನ್ನದು ಮೇಷ್ಟ್ರು ಪಾತ್ರ, ನಾನಾ ಪಾಟೇಕರ್ ಅವರದ್ದು ಶೂದ್ರನ ಪಾತ್ರ, ಇಡೀ ಚಿತ್ರೀಕರಣ ಮಂಗಳೂರಿನ ಕಾರ್ನಾಡ್ನಲ್ಲಿ ನಡೆಯಿತು. ನಾನಾ ಪಾಟೇಕರ್ ನನ್ನ ನೋಡುತ್ತಿದ್ದಂತೆ ನೀವು ರಂಗಭೂಮಿ ಕಲಾವಿದರಾ ಎಂದು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಲ್ಲಿಂದ ಇಬ್ಬರ ಆತ್ಮೀಯತೆ ಬೆಳೆಯಿತು. ಅವರೊಬ್ಬ ಅದ್ಭುತ ನಟ ಹಾಗೂ ವ್ಯಕ್ತಿ. ಒಂದೊಳ್ಳೆ ತಂಡ ಹಾಗೂ ದಿಗ್ಗಜ ನಟರೊಂದಿಗೆ ನಟಿಸಲು ನನಗೆ ಅವಕಾಶ ಸಿಕ್ತು.
• ಹಿರಿಯ ನಟನಾಗಿ ನಿಮಗೆ ಬೇಸರ ತರಿಸಿದ ಸಂಗತಿಯೇನು?
ಈ ನಡುವೆ ನಮ್ಮಂತ ಹಿರಿಯ ನಟರಿಗೆ ಅವಕಾಶಗಳೇ ಸಿಗುತ್ತಿಲ್ಲ. ನಮ್ಮಲ್ಲಿರುವ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳೋದಿಲ್ಲ. ಚಿತ್ರರಂಗ ಈಗ ತುಂಬಾ ಬದಲಾಗಿದೆ. ನವ ನಿರ್ದೇಶಕರು ಹಿರಿಯ ನಟರನ್ನು ನಡೆಸಿಕೊಳ್ಳುವ ರೀತಿ ಬೇಸರ ತರಿಸುತ್ತೆ. ಕಥೆ, ಸ್ಕ್ರಿಪ್ಟ್ ಬಗ್ಗೆ ಮಾಹಿತಿಯನ್ನು ಸರಿಯಾಗಿ ನೀಡೋದಿಲ್ಲ. ಇದ್ರಿಂದ ಪಾತ್ರಕ್ಕೆ ನ್ಯಾಯ ಒದಗಿಸಲು ನಮಗೆ ಸಾಧ್ಯವಾಗೋದಿಲ್ಲ. ನಮ್ಮ ಅನುಭವಕ್ಕೂ ಅವರು ಬೆಲೆ ಕೊಡೋದಿಲ್ಲ, ಕೆಲವರಿಗಂತೂ ನಮ್ಮ ಬಗ್ಗೆ ಗೊತ್ತೇ ಇರೋದಿಲ್ಲ. ಅವರ ಮಾತುಗಳನ್ನ ಕೇಳಿದಾಗ ಮನಸ್ಸಿಗೆ ನೋವಾಗುತ್ತೆ. ಇದು ಈ ನಡುವೆ ಮನಸ್ಸಿಗೆ ತುಂಬಾ ಬೇಸರ ತರಿಸಿದೆ. ಇದನ್ನೂ ಓದಿ:ಸೋಲು-ಗೆಲುವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ, ಯಾವುದೇ ರಿಗ್ರೆಟ್ ಇಲ್ಲ- ನಟ ದಿಲೀಪ್ ರಾಜ್