– ಸಿಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ಕಿಡಿ
ಬೆಂಗಳೂರು: ನನಗೆ ಸಚಿವ ಸ್ಥಾನ ಕೊಡಬೇಕು ಅಂತ ಹೇಳುತ್ತಿಲ್ಲ. ಗೆದ್ದಿರುವ ಶಾಸಕರಿಗೆ ಕೊಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರುವ ವಾಸ್ತವಾಂಶವನ್ನು ತಿಳಿಸುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಯಾರನ್ನು ಸೇರಿಸಬೇಕು, ಕೈಬಿಡಬೇಕು ಅನ್ನೋದು ಸಿಎಂ, ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಬಿಟ್ಟ ನಿರ್ಧಾರ. ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಕೆಲವರನ್ನು ಕೈ ಬಿಡಬೇಕಾಗುತ್ತದೆ. ಇದು ಬಹಳಷ್ಟು ಶಾಸಕರ ಅಭಿಪ್ರಾಯ ಎಂದರು.
Advertisement
Advertisement
ಮೂರ್ನಾಲ್ಕು ಬಾರಿ ಗೆದ್ದವರನ್ನು ಮಂತ್ರಿ ಮಾಡಬೇಕಾಗುತ್ತದೆ. ರಾಜ್ಯಾಧ್ಯಕ್ಷರಿಗೆ ಈ ವಿಚಾರ ಹೇಳಿದ್ದೇವೆ. ಈ ವಿಚಾರವನ್ನು ನಾವು ಸಿಎಂಗೆ ಕೂಡ ಹೇಳುತ್ತೇವೆ. ಮುಂದಿನ ಉಪಚುನಾವಣೆ, ಗ್ರಾ.ಪಂ. ಜಿ.ಪಂ ಚುನಾವಣೆಯ ದೃಷ್ಟಿಯಿಂದ ತೀರ್ಮಾನ ಮಾಡಬೇಕು ಅಂತಾ ಹೇಳಿದ್ದೇವೆ. ನನಗೇ ಸಚಿವ ಸ್ಥಾನ ಕೊಡಬೇಕು ಅಂತ ಹೇಳುತ್ತಿಲ್ಲ. ಗೆದ್ದಿರುವ ಶಾಸಕರಿಗೆ ಕೊಡಬೇಕು. ನಮ್ಮ ಜಿಲ್ಲೆ, ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಕೇಳಿರುವುದಾಗಿ ಹೇಳಿದರು.
Advertisement
ರಾಜ್ಯದ ಅಧ್ಯಕ್ಷರ ಜೊತೆ ಒಂದು ಗಂಟೆ ಕಾಲ ಚರ್ಚೆ ಮಾಡಿದ್ದೇವೆ. ನಾವು ಹೇಳಬೇಕಿರೋದನ್ನು ಹೇಳಿದ್ದೇವೆ. ಕೆಲವು ಸಚಿವರು ಸಭೆ ಸೇರಿದರು. ನಾವೂ ಶಾಸಕರೂ ಸಭೆ ಸೇರುತ್ತೇವೆ ಅಂದಿದ್ದೇವೆ. ಸಭೆ ಸೇರೋದು ಬೇಡ, ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತೆ ಅಂತ ಅಧ್ಯಕ್ಷರು ಸಲಹೆ ಕೊಟ್ಟರು ಎಂದರು.
Advertisement
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ್ದರ ಬಗ್ಗೆ ಸ್ಪಷ್ಟನೆ ಕೇಳಲು ನಮ್ಮನ್ನು ಇಲ್ಲಿ ಕರೆಸಿರಲಿಲ್ಲ. ರಾತ್ರಿ ನಾನೇ ಅಧ್ಯಕ್ಷರಿಗೆ ಕರೆ ಮಾಡಿ ಬಂದು ಭೇಟಿ ಮಾಡ್ತೇನೆ ಅಂದಿದ್ದೆ. ಅಧ್ಯಕ್ಷರಿಗೆ ಎಲ್ಲವನ್ನೂ ಹೇಳಿದ್ದೇವೆ. ಕೆಲವರನ್ನ ಸಂಪುಟದಿಂದ ಕೈಬಿಡಲು ಮನವಿ ಮಾಡಿದ್ದೇವೆ. ಕೆಲವರಿಗೆ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಿ ಅಂತ ಕೇಳಿದ್ದೇವೆ ಎಂದು ಹೇಳಿದರು.
ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ರಾಮ ರಾಮ ಅಂತ ಒಬ್ಬರ ಹೆಸರನ್ನು ನಾನು ಜಪ ಮಾಡಲ್ಲ ಅವರ ಹೆಸರು ಕೂಡ ಹೇಳಲ್ಲ. ಆದರೆ ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾವಂತೂ ಸುಮ್ಮನೆ ಇರಲ್ಲ ಎಂದು ಹೆಸರು ಪ್ರಸ್ತಾಪ ಮಾಡದೆ ಸಿಪಿ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಶಾಸಕ ಮುನಿರತ್ನ, ರಾಜ್ಯಾಧ್ಯಕ್ಷರಿಗೆ ಅಭಿನಂದನೆ ತಿಳಿಸಿ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಧ್ಯಕ್ಷರ ಗಮನ ಸೆಳೆದಿದ್ದೇನೆ ಎಂದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚುನಾಯಿತರಾದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಶಾಸಕ ಮುನಿರತ್ನ ಅವರು ಅಭಿನಂದಿಸಿದರು.