ರಾಮನಗರ: 2021ನೇ ವರ್ಷ ಶುರುವಾಗಿದೆ. ಆದ್ರೆ 21ನೇ ಶತಮಾನದಲ್ಲೂ ಮೂಢನಂಬಿಕೆಗಳಿಗೆ ಕೊನೆ ಇಲ್ಲವಾಗಿದೆ. ಹೆರಿಗೆಯನ್ನು ಸೂತಕವೆಂದು ಭಾವಿಸಿ ಬಾಣಂತಿಯನ್ನು ಊರ ಹೊರಗೆ ಗುಡಿಸಲಲ್ಲಿ ಇರಿಸುವ ಸಂಪ್ರದಾಯ ಇನ್ನೂ ರಾಮನಗರದಲ್ಲಿ ಜೀವಂತವಾಗಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯನ್ನು ಗ್ರಾಮದ ಹೊರಗೆ ಸಣ್ಣ ಗುಡಿಸಲು ಮಾಡಿ ಅದರಲ್ಲಿ ವಾಸಿಸಲು ಹೇಳಿದ್ದಾರೆ. ನಡುಗುವ ಚಳಿಯಲ್ಲಿ ಬಾಣಂತಿ ಪರದಾಡುತ್ತಿದ್ದಾಳೆ. ಮಾಗಡಿ ತಾಲೂಕಿನ ಗೊಲ್ಲರಹಟ್ಟಿಯ ಕೋಮಲಾ ಅವರು ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. 2 ವರ್ಷದ ಹಿಂದೆ ಚಂದ್ರಯ್ಯ ಜೊತೆ ಇವರ ಮದುವೆ ಆಗಿತ್ತು. ಸೂತಕ ದೂರ ಮಾಡಲು ಬಾಣಂತಿ ಮತ್ತು ಮಗುವನ್ನು ಒಂದೂವರೆ ತಿಂಗಳು ಮನೆಯಿಂದ ದೂರ ಇಡಬೇಕು, ಇಲ್ಲವಾದ್ರೆ ಹುಲಿಗಪ್ಪ, ಜಿಂಜಪ್ಪ ದೇವರು ತಮ್ಮ ಮನೆತನಕ್ಕೆ ಕೆಡಕು ಮಾಡುತ್ತಾರೆ ಎನ್ನುವುದು ನಂಬಿಕೆ.
Advertisement
Advertisement
ಊಟ ತಂದು ಗುಡಿಸಿಲಿನಿಂದ ದೂರವೇ ಇಟ್ಟುಹೋಗುತ್ತಾರೆ. ಯಾರೂ ಆಕೆಯನ್ನು ಮುಟ್ಟುವುದಿಲ್ಲ. ಆ ಚಿಕ್ಕ ಗುಡಿಸಿನಲ್ಲಿ ಬಾಣಂತಿ ವಾಸ ಮಾಡಿ 15 ದಿವಸ ಕಳೆದಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಕುಟುಂಬಸ್ಥರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿಲ್ಲ.