ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ನಿನ್ನೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.
ಕೊರೊನಾ ಸೋಂಕು ದೃಢ ಪಟ್ಟಿರುವ ಬಗ್ಗೆ ಟ್ವೀಟ್ ಮಾಡಿ ಧ್ರುವ ಸರ್ಜಾ ಮಾಹಿತಿ ನೀಡಿದ್ದರು. ಆದರೆ ಕೊರೊನಾ ಸೋಂಕಿನ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ದ ಧ್ರುವ ಸರ್ಜಾ, ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದರು. ಅಲ್ಲದೇ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.
Advertisement
ಈ ಹಿಂದೆ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.