ಚಿಕ್ಕಬಳ್ಳಾಪುರ: ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತ್ಯವ್ಯ ಹೂಡಿದ್ದ ಸಚಿವ ನಾರಾಯಣಗೌಡ ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ನಾನೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ ಎಂದರು.
Advertisement
Advertisement
ರಾತ್ರಿಯೇ ನಂದಿಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದ ಸಚಿವರು, ಬೆಳ್ಳಂಬೆಳಗ್ಗೆ ರೌಂಡ್ಸ್ ಹಾಕಿದರು. ಸಚಿವನಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ್ದೇನೆ. ನಂದಿ ಗಿರಿಧಾಮದ ಪ್ರಾಕೃತಿಕ ಸೊಬಗು ಸೌಂದರ್ಯ ಕಂಡು ಸಂತೋಷವಾಗಿದೆ. ಮತ್ತಷ್ಟು ಅಭಿವೃದ್ದಿ ಮಾಡುತ್ತೇನೆ ಆದರೆ ಯಾವುದೇ ಕಾರಣಕ್ಕೂ ನಂದಿಗಿರಿಧಾಮವನ್ನ ಪ್ರವಾಸೋದ್ಯಮ ಇಲಾಖೆಗೆ ಬಿಟ್ಟುಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
Advertisement
Advertisement
ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ನಂದಿಗಿರಿಧಾಮ ಹಾಗೂ ಕೆಮ್ಮಣ್ಣುಗುಂಡಿಯನ್ನ ಪ್ರವಾಸೋದ್ಯಮ ಇಲಾಖೆಗೆ ನೀಡುವಂತೆ ಬೆಂಗಳೂರಿನಲ್ಲಿ ನಡೆಸಲಾಗಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮೌಖಿಕ ಆದೇಶ ನೀಡಿದ್ದರು. ಆದರೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದಕ್ಕೆ ಹಲವು ಪರಿಸರವಾದಿಗಳು, ಸ್ಥಳೀಯ ಜನ ಹಾಗೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂದು ಸಹ ಕೆಲ ಸಂಘಟನೆಯವರು ಹಾಗೂ ಸ್ಥಳೀಯರು ನಮ್ಮನ್ನು ಭೇಟಿ ಮಾಡಿ, ಹಸ್ತಾಂತರ ಮಾಡದಂತೆ ಆಗ್ರಹಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಯಾವುದೇ ಕಾರಣಕ್ಕೂ ನಂದಿಗಿರಿಧಾಮ ಹಾಗೂ ಕೆಮ್ಮಣ್ಣುಗುಂಡಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದಿಲ್ಲ. ನಾವೇ ಅಭಿವೃದ್ದಿ ಮಾಡುತ್ತೇವೆ. ನಂದಿ ಗಿರಿಧಾಮ ಔಷಧಿ ಗುಣಗಳುಳ್ಳ ಸಸ್ಯ ಪ್ರಭೇದ ಇರುವ ತಾಣ. ಇದೊಂದು ಆರೋಗ್ಯ ಧಾಮ ಕೂಡ ಹೀಗಾಗಿ ನಂದಿ ಗಿರಿಧಾಮವನ್ನ ತೋಟಗಾರಿಕಾ ಇಲಾಖೆಯಲ್ಲೇ ಉಳಿಸಿಕೊಂಡು ಅಭಿವೃದ್ಧಿ ಪಡಿಸುತ್ತೇವೆ. ಈ ಹಸ್ತಾಂತರ ವಿಚಾರದಲ್ಲಿ ಸಂಘಟನೆಗಳು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೋಟಗಾರಿಕಾ ಇಲಾಖೆಯಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.