ಚಾಮರಾಜನಗರ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದಂತೆ ಹನೂರು ತಾಲೂಕಿನ ಕಣ್ಣೂರು ಗ್ರಾಮಪಂಚಾಯತ್ನ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ.
ಅಧಿಕಾರಕ್ಕಾಗಿ ಬಿಜೆಪಿ, ಜೆಡಿಎಸ್ ಸದಸ್ಯರ ಆಣೆ ಪ್ರಮಾಣದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿರುವುದಕ್ಕೆ ಟೀಕೆ ಕೂಡ ವ್ಯಕ್ತವಾಗಿತ್ತು. ಇದೀಗ ಅಧಿಕಾರವಿಡಿದ ಮೈತ್ರಿ ಅಭ್ಯರ್ಥಿಗಳು ಆಣೆ ಪ್ರಮಾಣವನ್ನು ಸಮರ್ಥಿಸಿಕೊಂಡಿದ್ದಾರೆ. ಕಣ್ಣೂರು ಪಂಚಾಯ್ತಿ ಅಧ್ಯಕ್ಷರಾಗಿ ಜೆಡಿಎಸ್ ಮಹದೇವ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವ ಹಾಗೂ ಕಾಂತರಾಜು ನಾಮಪತ್ರ ಸಲ್ಲಿಸಿದ್ದರು. ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಮತ್ತು ರಾಜಮ್ಮ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 15 ಸ್ಥಾನವುಳ್ಳ ಕಣ್ಣೂರು ಗ್ರಾಮ ಪಂಚಾಯ್ತಿಯಲ್ಲಿ ಮಹದೇವ ಹಾಗೂ ಭಾಗ್ಯಮ್ಮ ತಲಾ 10 ಮತಗಳನ್ನು ಪಡೆದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಇವರು ವಿರುದ್ಧ ಸ್ಪರ್ಧಿಸಿದ್ದ ಕಾಂತರಾಜು ಹಾಗೂ ರಾಜಮ್ಮ ತಲಾ 5 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆಂದು ಚುನಾವಣಾಧಿಕಾರಿ ರೇಷ್ಮೆಇಲಾಖೆಯ ಡಾ. ಸರಿತಾ ಕುಮಾರಿ ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾದ ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.