ದಾವಣಗೆರೆ: ಮಳೆಯಿಂದ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ದೋಣೆಯನ್ನು ಬಿಟ್ಟು ಗ್ರಾಮಸ್ಥರು ರಸ್ತೆ ದಾಟಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಬಳ್ಳಾರಿಯ ಹರಪ್ಪನಹಳ್ಳಿ ತಾಲೂಕಿನ ಚಿಕ್ಕಮ್ಯಾಗಳಗೆರೆ ಗ್ರಾಮಸ್ಥರು ಈ ರೀತಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಮಳೆ ಬಂದರೆ ಸಾಕು ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬುತ್ತದೆ. ಹೀಗಾಗಿ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪನವರಿಗೆ ಕೂಡ ಕರೆಮಾಡಿ, ರಸ್ತೆ ಕಾಮಗಾರಿ ಮಾಡಿಸಿ ಎಲ್ಲಾ ದೋಣೆ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ದೋಣೆಯಲ್ಲ ಕುದುರೆ ಹಾಗೂ ಆನೆ ಕೊಡಿಸುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದರು ಎಂದು ಜನರು ಆರೋಪಿಸಿದ್ದಾರೆ.
Advertisement
Advertisement
ಅಲ್ಲದೇ ರಸ್ತೆ ಕಾಮಗಾರಿ ಮಾಡುವಂತೆ ಶಾಸಕ ಕರುಣಾಕರ್ ರೆಡ್ಡಿಯವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋಗಿ ಗುಂಡಿಯಲ್ಲಿ ದೋಣಿ ಹಾಕಿ ಮಕ್ಕಳನ್ನು ಕೂರಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಹಾಗೆಯೇ ರಸ್ತೆ ಕಾಮಗಾರಿ ಮಾಡುವಂತೆ ಮನವಿ ಮಾಡಿದ್ದಾರೆ.