ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೂ ವಿಜಯಪುರಕ್ಕೂ ನಂಟು ಇತ್ತು. ಈ ಹಿಂದೆ 2010ರಲ್ಲಿ ಅಂದು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಹೋರಾಟದ ಮೂಲಕ ಸದ್ದು ಮಾಡಿದ್ದ ಭೀಮಾ ನದಿ ನೀರು ರೈತವರ್ಗ ಸಮಿತಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್. ಎಸ್. ದೊರೆಸ್ವಾಮಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು.
Advertisement
ಮಹಾರಾಷ್ಟ್ರ ಕರ್ನಾಟಕದ ಪಾಲಿನ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಭೀಮಾ ನದಿ ನೀರು ರೈತವರ್ಗ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 2000ರಲ್ಲಿ ರಚನೆಯಾಗಿದ್ದ ಈ ಸಮಿತಿ ತನ್ನ ಹೋರಾಟದ ಮೂಲಕ ಅಂದು ಬೇಸಿಗೆಯಲ್ಲಿ ಪ್ರತಿದಿನ 400 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರಕ್ಕೆ ಮಧ್ಯಂತರ ಆದೇಶ ನೀಡಿತ್ತು.
Advertisement
Advertisement
ಈ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಗ್ರಾಮದ ಬಳಿ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರ ಜನವರಿ 8 ರಿಂದ 10ರ ವರೆಗೆ ಮೂರು ದಿನ ನಡೆದಿತ್ತು. ಸಮಿತಿ ಅಧ್ಯಕ್ಷ ಮತ್ತು ಭೀಮಾ ಹೋರಾಟಗಾರ ಈ ಕಾರ್ಯಕ್ರಮ ಆಯೋಜಿಸಿದ್ದರು.
Advertisement
ಈ ಹೋರಾಟಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ದೊರೆಸ್ವಾಮಿ, ಕಾರ್ಯಕ್ರಮದ ಅಚ್ಚುಕಟ್ಟುತನದಿಂದ ಪ್ರಭಾವಿತರಾಗಿ ಮೂರೂ ದಿನ ಕಾರ್ಯಕ್ರಮ ಮುಗಿಯುವವರೆಗೆ ಅಲ್ಲಿಯೇ ಇದ್ದು ಹೋರಾಟಗಾರರನ್ನು ಹುರಿದುಂಬಿಸಿದ್ದರು.