ಮಂಗಳೂರು: ದೇಶದಲ್ಲಿ ಬಿಜೆಪಿ ಪರವಾದ ಅಲೆ ಹೆಚ್ಚಾಗಿದೆ. ಜನರ ಅಭಿಮಾನ ಜಾಸ್ತಿಯಾಗಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪಂಚರಾಜ್ಯ, ಕರ್ನಾಟಕದ ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಪಶ್ಷಿಮ ಬಂಗಾಳ ಫಲಿತಾಂಶವೂ ಬಿಜೆಪಿಯ ದೊಡ್ಡ ಸಾಧನೆಯಾಗಿದ್ದು, ಅಸ್ಸಾಂನಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನದ ಜೊತೆ ಸರ್ಕಾರವೂ ಉಳಿದಿದೆ. ಪುದುಚೇರಿಯಲ್ಲಿ ಶೂನ್ಯದಿಂದ ಹನ್ನೊಂದು ಸ್ಥಾನಕ್ಕೆ ಬಂದಿದ್ದೇವೆ. ಸಂಜೆಯೊಳಗೆ ಸರಿಯಾದ ಚಿತ್ರಣ ತಿಳಿಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.
ಬೆಳಗಾವಿಯಲ್ಲಿ ಸಂಜೆಯೊಳಗೆ ನಮ್ಮ ಪರವಾಗಿ ಫಲಿತಾಂಶ ಬರುತ್ತೆ ಎಂಬ ವಿಶ್ವಾಸವಿದೆ. ಮಸ್ಕಿಯಲ್ಲಿ ಸೋಲಾಗಿದೆ ಸೋಲನ್ನು ಒಪ್ಪಿಕೊಳ್ಳಬೇಕು. ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಇದ್ದೇ ಇರುತ್ತದೆ. ಉಪಚುನಾವಣೆಗಳು ನಡೆದಾಗ ಒಂದಷ್ಟು ಗೊಂದಲಗಳು ಇರುತ್ತದೆ.
ಮಸ್ಕಿಯಲ್ಲಿ ಯಾಕೆ ಸೋಲಾಯಿತು ಎಂದು ಎರಡು ದಿನದಲ್ಲಿ ಅವಲೋಕನ ನಡೆಸುತ್ತೇವೆ. ಯಾವ ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆ ಇಲ್ಲ. ಕೋವಿಡ್ ಮಧ್ಯೆಯೂ ಮತದಾನ ಮಾಡಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಗೆಲುವಿನ ಹಿನ್ನೆಲೆ ಕಾರ್ಯಕರ್ತರು ವಿಜಯೋತ್ಸವ ಮಾಡಬೇಡಿ. ಚುನಾವಣೆ ಬರುತ್ತೆ, ಗೆಲುವು ಮುಂದೆಯೂ ಇರುತ್ತೆ. ಕೋವಿಡ್ ಸಂತ್ರಸ್ತರ ಸೇವಾ ಕಾರ್ಯ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಕಟೀಲ್ ಮನವಿ ಮಾಡಿದರು.