– ಪಾರ್ಕ್, ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿ
– ಮದುವೆ ಮೇಲೂ ನಿಗಾ, ಹೆಚ್ಚು ಜನ ಸೇರದಂತೆ ಕ್ರಮ
ಬೆಂಗಳೂರು: ಕ್ಲೋಸ್ಡ್ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದರಿಂದ ಸೋಂಕು ಹೆಚ್ಚುತ್ತದೆ. ಹೀಗಾಗಿ ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಭರ್ತಿಗೆ ಇಳಿಸುವುದು ಹಾಗೂ ಪಾರ್ಕ್, ಜಿಮ್ ಸೇರಿದಂತೆ ಇತರೆ ಪ್ರದೇಶಗಳನ್ನು ಬಂದ್ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಬಗ್ಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಅಪಾರ್ಟ್ ಮೆಂಟ್, ಕಾಮನ್ ಏರಿಯಾಗಳ ಮೇಲೆ ನಿಗಾ ವಹಿಸುವುದು, ಆಟದ ಮೈದಾನ, ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಅಲ್ಲದೆ ಸಿನಿಮಾ ಹಾಲ್ ಗಳಲ್ಲಿ ಕೇಸ್ ಎಷ್ಟು ಬರುತ್ತಿದೆ ಎಂಬ ಮಾಹಿತಿ ಇಲ್ಲ. ಆದರೆ ಶೇ.100 ರಷ್ಟು ಜನರು ಕ್ಲೋಸ್ ಡೋರ್ ನಲ್ಲಿ ಇದ್ದಾಗ ಕೇಸ್ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಥಿಯೇಟರ್ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.
Advertisement
ಮದುವೆ ಮಂಟಪಗಳಲ್ಲಿ ಹಲವು ಗೊಂದಲಗಳಿವೆ. ಇಡೀ ಮದುವೆಗೆ 200 ಜನರು ಮಾತ್ರ ಸೇರಬೇಕು. ಈ ಜವಾಬ್ದಾರಿ ಮದುವೆ ಮಾಡುವವರ ಹಾಗೂ ಕಲ್ಯಾಣ ಮಂಟಪದ ಮಾಲೀಕರ ಮೇಲಿದೆ. ಕ್ಲೋಸ್ಡ್ ಏರಿಯಾದಲ್ಲಿ 200 ಜನ, ಓಪನ್ ಸ್ಪೇಸ್ ನಲ್ಲಿ 500 ಜನಕ್ಕೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.
Advertisement
ಮಾಲ್, ಅಂಗಡಿಗಳ ಮುಂದೆ ಮಾರ್ಷಲ್ ಕಾರ್ಯಚರಣೆ ಅಸಾಧ್ಯ. ಮಾಲ್ ಮಾಲೀಕರೇ ಜವಾಬ್ದಾರಿ ವಹಿಸಿಕೊಳ್ಳಬೇಕು. ಇವರು ಕೊರೊನಾ ರೂಲ್ಸ್ ಬ್ರೇಕ್ ಮಾಡಿದರೆ ಕೊರೊನಾ ಕೇಸ್ ಹೆಚ್ಚಳವಾಗುತ್ತವೆ. ಹೀಗಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಎಕ್ಸಿಬ್ಯುಷನ್ ಗಳಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಹೊರ ರಾಜ್ಯದಿಂದ ಬಂದವರು ನಿಯಮ ಉಲ್ಲಂಘನೆ ಮಾಡುತ್ತಿರುವ ಮಾಹಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸೋಂಕು ಬಂದ ಕುಟುಂಬದಲ್ಲಿ ಎಲ್ಲರಿಗೂ ಪಾಸಿಟಿವ್ ಆಗುತ್ತಿದೆ. ಈ ಬಗ್ಗೆ ಗಮನ ಇರಲಿ, ಸೋಂಕಿತರು ಸರಿಯಾಗಿ ಹೋಮ್ ಐಸೋಲೇಶನ್ ಆಗದಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಜೊತೆ ಚರ್ಚೆ ನಡೆಯುತ್ತಿದೆ. ಶೇ.90 ರಷ್ಟು ಕೇಸ್ ಗಳು ಲಕ್ಷಣ ರಹಿತವಾಗಿವೆ. ಪಾಸಿಟಿವಿಟಿ ರೇಟ್ ಶೇ.1.36 ಇದೆ. 12 ಕ್ಲಸ್ಟರ್ ಗಳು ಬೆಂಗಳೂರಿನಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಪ್ರಕರಣಗಳನ್ನು ಗುರುತಿಸುವ ಕೆಲಸ ವೇಗವಾಗಿ ನಡೆಯುತ್ತಿದೆ. ಐಎಲ್ ಐ ಸ್ಯಾರಿ ಕೇಸ್ ಗೆ ವಿಶೇಷ ಗಮನ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಹೊಸ ಕೆಲಸ ನೀಡಲಾಗಿದ್ದು, ಐಎಲ್ ಐ ಸ್ಯಾರಿ ಕೇಸ್ ಗಳ ಟೆಸ್ಟ್ ಹೆಚ್ಚಿಸಲು ಯೋಜಿಸಲಾಗಿದೆ. ಸಂಪರ್ಕ ಪತ್ತೆ ಹಚ್ಚಲು ಕ್ರಮ ವಹಿಸಲಾಗಿದ್ದು, ಕಂದಾಯ ಇಲಾಖೆ, ಇಂಜಿನಿಯರ್, ಟೀಚರ್ ಗಳನ್ನು ಬಳಕೆ ಮಾಡಿಕೊಂಡು ಒಂದು ಕೇಸ್ ಗೆ 15 ಜನರ ಗುರುತಿಸುವ ಕೆಲಸ ಆಗುತ್ತಿದೆ. ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿ ಶೇ.50 ರಷ್ಟು ಜನ ಪಾಸಿಟಿವ್ ಆಗುತ್ತಿದ್ದಾರೆ ಎಂದು ತಿಳಿಸಿದರು.
ರಾಜಧಾನಿಯಲ್ಲಿ 3 ಲಕ್ಷ ಜನರು ವ್ಯಾಕ್ಸಿನ್ ಪಡೆದಿದ್ದಾರೆ. ವ್ಯಾಕ್ಸಿನ್ ಕೆಲಸ ವೇಗ ಪಡೆದಿದೆ. 80 ಸಾವಿರ ಜನರಿಗೆ ಶೆಡ್ಯೂಲ್ ಮಾಡುತ್ತಿದ್ದೇವೆ. ಹೀಗಾಗಿ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಆದರೆ ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಕಡಿಮೆ ಆಗಿಲ್ಲ ಎಂದು ತಿಳಿಸಿದರು.
ಅಂಬುಲೆನ್ಸ್, ಟಿಟಿಗಳ ಹಣ ಬಾಕಿ ಉಳಿದಿದೆ. ಸರ್ಕಾರ ಹಣ ಬಿಡುಗಡೆ ಮಾಡಿದಾಗ ಅಂಬುಲೆನ್ಸ್ಗಳ ಹಳೆ ಬಾಕಿ ಪಾವತಿ ಆಗಲಿದೆ. 198 ವಾರ್ಡ್ ಗೂ ಒಂದೊಂದು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲೇ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ 3 ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಖಾಸಗಿ ಆಸ್ಪತ್ರೆ ಬಳಕೆ ಸದ್ಯ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
5 ಕ್ಕಿಂತ ಹೆಚ್ಚು ಕೇಸ್ ಬಂದಾಗ ಮೈಕ್ರೋ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗುತ್ತದೆ. ಒಟ್ಟು 12 ಕಡೆ ಈ ರೀತಿಯ ಕೇಸ್ ಬಿಟ್ಟು ಉಳಿದ ಎಲ್ಲವೂ ಸಿಂಗಲ್ ಕೇಸ್ ಗಳು. ಪಾಲಿಕೆ ಈಗಾಗಲೇ ಪ್ರಸ್ತಾವನೆ ಕೊಟ್ಟಿದೆ. ಉಳಿದ ಎಲ್ಲ ಕ್ರಮ ಸರ್ಕಾರ ಕೈಗೊಳ್ಳಬೇಕಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.
ಬಿಬಿಎಂಪಿ ಪ್ರಸ್ತಾವನೆ ಬಗ್ಗೆ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ಬಿಬಿಎಂಪಿಯಿಂದ ಮಾರ್ಗಸೂಚಿ ಕುರಿತು ಪ್ರಸ್ತಾವನೆ ಬಂದಿದೆಯಂತೆ. ನಾನು ಇನ್ನೂ ನೋಡಿಲ್ಲ. ಈ ಬಗ್ಗೆ ಇಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ರಾಜ್ಯದ ವಿವಿಧ ಕಡೆ ಯಾವ ರೀತಿ ಬಿಗಿ ಕ್ರಮ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.