ಬೆಳ್ಳಿತೆರೆಯ ಮೇರು ಕಲಾವಿದರೊಂದಿಗೆ ತೆರೆಹಂಚಿಕೊಂಡು, ಅದ್ಭುತ ನಟನೆ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಗಳಾಗಿರುವ ಖ್ಯಾತ ನಟಿ ವಾಣಿಶ್ರೀ ಕಲಾವಿದೆಯಾಗಿ 25 ವರ್ಷಗಳ ಕಲರ್ ಫುಲ್ ಪಯಣದ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. ಬನ್ನಿ ಏನ್ ಹೇಳಿದ್ದಾರೆ ನೋಡೋಣ.
ಕಲಾ ಬದುಕು ಶುರುವಾಗಿದ್ದೇ ಒಂದು ಆಕಸ್ಮಿಕ ಎಂದು ಯಾವಾಗಲೂ ಹೇಳುತ್ತೀರ ನೀವು?
ಹೌದು, ನಾನು ಯಾವತ್ತೂ ಕಲಾವಿದೆಯಾಗಬೇಕು ಚಿತ್ರರಂಗಕ್ಕೆ ಬರಬೇಕೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಅದಕ್ಕಾಗಿ ತಯಾರಿಯನ್ನು ಮಾಡಿಕೊಂಡಿರಲಿಲ್ಲ. ನನಗೆ ನನ್ನ ಪರಿಚಯಸ್ಥರೊಬ್ಬರು ಸಿನಿಮಾದಲ್ಲಿ ಪಾತ್ರವೊಂದಿದೆ ನಟಿಸುತ್ತೀರಾ ಕೇಳಿದ್ರು ನಾನು ಒಮ್ಮೆ ಪ್ರಯತ್ನ ಪಡೋಣ ಎಂದು ನಟಿಸಿದೆ ಅಲ್ಲಿಂದ ಒಂದೊಂದೇ ಸಿನಿಮಾಗಳಲ್ಲಿ ನಟಿಸುತ್ತಾ ನಟನೆ ನನ್ನ ಪ್ರೊಫೇಷನ್ ಆಯ್ತು, ನನ್ನ ಬದುಕಾಯ್ತು.
Advertisement
Advertisement
ನೀವು ನಟಿಸಿದ ಆರಂಭಿಕ ಸಿನಿಮಾ, ಧಾರಾವಾಹಿ ಯಾವುದು?
ಭರ್ಜರಿ ಗಂಡು. ಕಲಿಯುಗ ಸೀತ. ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ ನಾನು ನಟಿಸಿದ ಮೊದಲ ಮೂರು ಸಿನಿಮಾಗಳು, ಮೊದಲ ಬಾರಿ ಧಾರಾವಾಹಿಗೆ ಬಣ್ಣ ಹಚ್ಚಿದ್ದು ಡಿಡಿ1ರಲ್ಲಿ ಪ್ರಸಾರವಾಗುತ್ತಿದ್ದ ಸ್ವರ ಸಂಪದ ಧಾರಾವಾಹಿಗೆ.
Advertisement
ಪ್ರಸ್ತುತ ಯಾವ ಸೀರಿಯಲ್ನಲ್ಲಿ ನಟಿಸುತ್ತಿದ್ದೀರಾ?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯಲ್ಲಿ ಈಗ ನಟಿಸುತ್ತಿದ್ದೇನೆ. ಇತ್ತೀಚೆಗೆ ನಾನು ನಟಿಸುತ್ತಿದ್ದ ಸೀತಾ ವಲ್ಲಭ, ಪ್ರೇಮಲೋಕ ಧಾರಾವಾಹಿಗಳು ಮುಕ್ತಾಯವಾಗಿವೆ.
Advertisement
ನಿಮಗೆ ಪಾಪ್ಯುಲ್ಯಾರಿಟಿ ಕೊಟ್ಟ ಪಾತ್ರ ಯಾವುದು?
ಸಿನಿಮಾಗಳು ನನಗೆ ಹೆಸರು ತಂದು ಕೊಟ್ಟರೂ ಸಹ ಜನ ನನ್ನನ್ನು ಈಗಲೂ ಗುರುತಿಸೋದು ಧಾರಾವಾಹಿ ಪಾತ್ರಗಳ ಮೂಲಕವೇ. ಆ ಪಾತ್ರಗಳು ಜನರ ಮನಸ್ಸಲ್ಲಿ ಈಗಲೂ ಉಳಿದುಕೊಂಡಿವೆ. ಸೀರಿಯಲ್ನಲ್ಲಿ ನಾನು ನಟಿಸಿದ ಪಾತ್ರಗಳು ಜನಮನ್ನಣೆ ತಂದುಕೊಟ್ಟಿವೆ. ಮುಖ್ಯವಾಗಿ ರಾಧಾ, ಚುಕ್ಕಿ ಧಾರಾವಾಹಿಯ ಪಾತ್ರಗಳು ನನಗೆ ಹೆಚ್ಚು ಖ್ಯಾತಿ ತಂದುಕೊಟ್ಟಿವೆ. ಮೊದಲೆಲ್ಲ ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದರಿಂದ ಆಚೆ ಕಡೆ ಜನ ಸಿಕ್ಕಾಗ ನನ್ನ ನೋಡಿ ನೀವು ತುಂಬ ಕೆಟ್ಟವರು ಎಂದು ಬೈದಿದ್ದು ಇದೆ ಅಷ್ಟು ಕನೆಕ್ಟ್ ಆಗಿದ್ವು ನನ್ನ ಪಾತ್ರಗಳು.
ಇಷ್ಟು ವರ್ಷದ ನಿಮ್ಮ ಕಲಾ ಬದುಕಿನಲ್ಲಿ ನೀವು ಕಂಡುಕೊಂಡ ಸತ್ಯ?
ಈ ಕ್ಷೇತ್ರದಲ್ಲಿ ಯಾವುದಕ್ಕೂ ಬ್ರ್ಯಾಂಡ್ ಆಗಬಾರದು. ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ರೆ ಅದಕ್ಕೆ ನಿಮ್ಮನ್ನು ಬ್ರ್ಯಾಂಡ್ ಮಾಡಿ ಬಿಡುತ್ತಾರೆ. ಒಂದೇ ಪಾತ್ರಗಳನ್ನು ಮಾಡದೇ ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಬೇಕು. ನಮ್ಮ ವೃತ್ತಿಜೀವನವನ್ನು ತುಂಬಾ ಚೊಕ್ಕವಾಗಿ ಇಟ್ಟುಕೊಳ್ಳಬೇಕು. ಪರಿಶ್ರಮ ತುಂಬಾ ಮುಖ್ಯ. ಇದು ನಾನು ಕಂಡುಕೊಂಡ ಪಾಠ.
ಒಮ್ಮೆ ನಿಮ್ಮ ಬಣ್ಣದ ಲೋಕದ ಜರ್ನಿ ಮೆಲುಕು ಹಾಕೋದಾದ್ರೆ?
ಕಲಾವಿದೆಯಾಗಿ ಇಪ್ಪತ್ತೈದು ವರ್ಷದ ಪಯಣ. ಡಿಡಿ1ರಿಂದ ಆರಂಭವಾದ ಪಯಣ ಈಗಲೂ ಉಳಿದುಕೊಂಡಿದೆ ಅನ್ನೋದು ಹೆಮ್ಮೆಯ ವಿಚಾರ. 90 ಸಿನಿಮಾಗಳು, 300ಕ್ಕೂ ಹೆಚ್ಚು ಧಾರವಾಹಿಗಳು, ಚಿತ್ರರಂಗದ ಮೇರು ನಟರಿಂದ ಹಿಡಿದು ಸ್ಟಾರ್ ನಟ-ನಟಿಯರು, ನಿರ್ದೇಶಕರ ಜೊತೆ ಕೆಲಸ ಮಾಡಿದ ಮರೆಯಲಾರದ ನೆನಪುಗಳು. ಹವ್ಯಾಸವಾಗಿ ಶುರುವಾದ ಪಯಣ ಪೂರ್ಣ ಪ್ರಮಾಣದ ಕಲಾವಿದೆಯನ್ನಾಗಿ ಬದುಕು ನೀಡಿದ್ದು, ಒಂದಿಷ್ಟು ಹೆಸರು, ಪ್ರಶಂಸೆ. ಒಬ್ಬ ಕಲಾವಿದೆಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ.
ಶೂಟಿಂಗ್ ಸಮಯದಲ್ಲಿ ಆದ ಮರೆಯಲಾಗದ ಘಟನೆ.
ಮಾಂಗಲ್ಯ ಧಾರಾವಾಹಿಯಲ್ಲಿ ನಟಿಸಬೇಕಾದ್ರೆ ನೇಣು ಹಾಕಿಕೊಳ್ಳುವ ದೃಶ್ಯವೊಂದರಲ್ಲಿ ನಟಿಸಬೇಕಿತ್ತು. ಆ ದೃಶ್ಯ ಮಾಡಬೇಕಾದ್ರೆ ನಿಜವಾಗಿಯೂ ನನ್ನ ಕತ್ತಿಗೆ ಕುಣಿಕೆ ಬಿದ್ದಿತ್ತು. ಸೆಟ್ ಹುಡುಗರು ನೋಡಿಲ್ಲವಾದರೆ ಅಂದು ನಾನು ಸತ್ತೆ ಹೋಗುತ್ತಿದ್ದೆ. ಅದು ನನ್ನ ಮರುಹುಟ್ಟು ಎನ್ನಬಹುದು. ಈ ಘಟನೆಯನ್ನು ನೆನಸಿಕೊಂಡ್ರೆ ಈಗಲೂ ಭಯವಾಗುತ್ತೆ.
ಮಗಳಿಗೂ ನಟನೆಯಲ್ಲಿ ಆಸಕ್ತಿ ಇದ್ದಂತಿದೆ ಚಿತ್ರರಂಗಕ್ಕೆ ಪರಿಚಯಿಸುತ್ತೀರಾ?
ಅವಳೀಗ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ನಟನೆಗೆ ಬರೋದಾದ್ರೆ ಅವಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಆದ್ರೆ ಯಾವತ್ತೂ ಆಕೆಗೆ ಇದೇ ಮಾಡು ಅದೇ ಮಾಡು ಎಂದು ನಾನು ಒತ್ತಡ ಹಾಕೋದಿಲ್ಲ. ಅವಳಿಗೆ ಇಷ್ಟವಾದ ಕ್ಷೇತ್ರದಲ್ಲಿ ಮುಂದುವರೆಯಲಿ ಅನ್ನೋದು ನನ್ನಾಸೆ. ಯಾರ ಸಹಾಯವಿಲ್ಲದೆ ಸ್ವಂತ ಪ್ರತಿಭೆಯಿಂದ ಮುಂದೆ ಬರಬೇಕು ಅನ್ನೋದು ಮಹದಾಸೆ.
ಆರಂಭದಲ್ಲಿ ನೀವಿದ್ದ ಚಿತ್ರರಂಗಕ್ಕೂ ಈಗ ಇರುವುದಕ್ಕೂ ಭಿನ್ನತೆ ಏನಿದೆ?
ಆಗ ಕಲಾವಿದರಿಗೆ ಅವಕಾಶಗಳು ತುಂಬಾ ಕಡಿಮೆ ಇದ್ವು. ಈಗಿರುವಷ್ಟು ವಾಹಿನಿಗಳೂ ಇರಲಿಲ್ಲ. ಜನ ನಮ್ಮನ್ನು ಗುರುತಿಸುತ್ತಿದ್ದುದ್ದು ತುಂಬಾ ಕಡಿಮೆ. ತಾಂತ್ರಿಕವಾಗಿಯೂ ಈಗಿರುವ ಆಯ್ಕೆಗಳು ಇರಲಿಲ್ಲ. ಆಗೆಲ್ಲ ಅರ್ಧ ಗಂಟೆಯ ಎಪಿಸೋಡ್ಗಾಗಿ ಮೂರು ದಿನ ಶೂಟಿಂಗ್ ಮಾಡುತ್ತಿದ್ವಿ. ಈಗ ತಂತ್ರಜ್ಞಾನ ಮುಂದುವರಿದಿದೆ ಒಂದು ದಿನದಲ್ಲಿ ಮೂರು ಎಪಿಸೋಡ್ ಶೂಟಿಂಗ್ ಮಾಡುತ್ತೇವೆ. ಹಲವಾರು ಟಿವಿ ಚಾನೆಲ್ಗಳು, ವಿಫುಲ ಅವಕಾಶಗಳು ಕಲಾವಿದರಿಗಿದೆ. ಒಂದೇ ಒಂದು ಸೀರಿಯಲ್ನಿಂದ ಪಾಪ್ಯುಲರ್ ಆಗುತ್ತಾರೆ. ಜೊತೆಗೆ ಪ್ರತಿಭೆ ಪ್ರದರ್ಶನಕ್ಕೆ ಸೋಶಿಯಲ್ ಮೀಡಿಯಾ ವೇದಿಕೆಯಿದೆ.
ಕಲಾವಿದೆಯಾಗಿ ನಿಮ್ಮ ಕನಸೇನು?
ಒಮ್ಮೆಯಾದ್ರು ಜೀವನದಲ್ಲಿ ಮೂಕಿ ಪಾತ್ರದಲ್ಲಿ ನಟಿಸಬೇಕು ಎಂಬ ಬಹುದೊಡ್ಡ ಕನಸಿದೆ. ಆ ಕನಸು ಇಲ್ಲಿವರೆಗೂ ಈಡೇರಿಲ್ಲ ಆ ಪಾತ್ರ ಸಿಗಲಿ ಎಂದು ಯಾವಾಗಲೂ ಬೇಡಿಕೊಳ್ಳುತ್ತೇನೆ. ಅದು ಬಿಟ್ರೆ ನನ್ನ ಕೊನೆ ಉಸಿರಿರುವರೆಗೂ ನಟಿಸಬೇಕು, ಚಾಲೆಂಜಿಂಗ್ ರೋಲ್ಗಳನ್ನು ಮಾಡಬೇಕು ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅಷ್ಟೇ ನನ್ನ ಕನಸು.
ನಿಮ್ಮ ಕಲಾ ಬದುಕು ತೃಪ್ತಿ ನೀಡಿದ್ಯಾ?
ತೃಪ್ತಿ ಕೊಟ್ಟಿಲ್ಲ ಖುಷಿ ಕೊಟ್ಟಿದೆ. ನನ್ನ ಪ್ರಕಾರ ಕಲಾವಿದರಿಗೆ ತೃಪ್ತಿ ಅನ್ನೋದು ಇರಬಾರದು. ಇನ್ನೂ ಹೆಚ್ಚು ಹೆಚ್ಚು ನಟಿಸಬೇಕು ಎಂಬ ದುರಾಸೆ ಇರಬೇಕು. ಆಗ ಹೊಸದನ್ನು ಕಲಿಯಬಹುದು. ತೃಪ್ತಿ ಸಿಕ್ಕಿದ್ರೆ ಜೀವನವೇ ಮುಗಿದ ಹಾಗೆ.