ಗಿರಿಗಿಟ್ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸೂಪರ್ ಸಕ್ಸಸ್ ಕಂಡ ನಟ ರೂಪೇಶ್ ಶೆಟ್ಟಿ, ಇದೀಗ `ಗಮ್ಜಾಲ್’ ಎಂಬ ಹಿಟ್ ಸಿನಿಮಾ ನೀಡಿ ಮತ್ತೊಂದು ಸಕ್ಸಸ್ ತಮ್ಮದಾಗಿಸಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ರಚಿಸಿ ನಟಿಸಿರುವ, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ನಿರ್ದೇಶನದ `ಗಮ್ಜಾಲ್’ ಸಿನಿಮಾ ಬಿಡುಗಡೆಯಾಗಿ ತುಳು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಚಿತ್ರ ತೆರೆಕಂಡು ದಕ್ಷಿಣ ಕನ್ನಡದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ಗಳಿಕೆಯಲ್ಲೂ ಕೂಡ ಸೌಂಡ್ ಮಾಡುತ್ತಿದೆ. ಈ ಮೂಲಕ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎಂಬ ಖ್ಯಾತಿಯನ್ನು `ಗಮ್ಜಾಲ್’ ಸಿನಿಮಾ ತನ್ನದಾಗಿಸಿಕೊಂಡಿದೆ.
Advertisement
Advertisement
`ಗಮ್ಜಾಲ್’ ಚಿತ್ರಕ್ಕೆ ಸಿಗುತ್ತಿರುವ ಜನರ ಪ್ರೀತಿಯನ್ನು ಕಂಡ ಚಿತ್ರತಂಡ ಬೇರೆ ಕಡೆಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿತ್ತು. ಸ್ಯಾಂಡಲ್ವುಡ್ ಖ್ಯಾತ ವಿತರಕ ಜಯಣ್ಣ `ಗಮ್ಜಾಲ್’ ಸಿನಿಮಾವನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಹನ್ನೆರಡು ಸೆಂಟರ್ಗಳಲ್ಲಿ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ರೂಪೇಶ್ ನಿರ್ದೇಶಿಸಿ ನಟಿಸಿದ್ದ ಗಿರಿಗಿಟ್ ಸಿನಿಮಾವನ್ನೂ ಕೂಡ ಜಯಣ್ಣ ಬೆಂಗಳೂರಿನಲ್ಲಿ ವಿತರಣೆ ಮಾಡಿದ್ದರು.
Advertisement
Advertisement
ಕಾಮಿಡಿ ಸಿನಿಮಾಗಳೇ ಪ್ರಧಾನವಾಗಿದ್ದ ತುಳು ಚಿತ್ರರಂಗದಲ್ಲಿ ಮೊದಲ ಬಾರಿ ಪ್ರಯೋಗಾತ್ಮಕ ಸಿನಿಮಾವೊಂದು ತೆರೆಕಂಡಿದೆ. ಚಿತ್ರದಲ್ಲಿ ಎರಡು ಕಥೆಗಳಿದ್ದು, ತಂದೆ, ತಾಯಿಯ ಪ್ರಾಮುಖ್ಯತೆ ಹಾಗೂ ಸಂಬಂಧಗಳ ಬೆಲೆಯನ್ನು ಅರ್ಥೈಸುವ ಕಥಾಹಂದರವನ್ನು `ಗಮ್ಜಾಲ್’ ಸಿನಿಮಾ ಹೊಂದಿದೆ.
ಬೆಂಗಳೂರಿನಲ್ಲಿ ಥಿಯೇಟರ್ಗಳಿಗೆ ಭೇಟಿ ನೀಡಿದಾಗ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಹಾಗೂ ಪ್ರೋತ್ಸಾಹದ ಬಗ್ಗೆ ಮಾತನಾಡಿರುವ ನಟ ರೂಪೇಶ್ ಶೆಟ್ಟಿ ತುಳು ಸಿನಿರಸಿಕರು ಉತ್ತಮ ಸಿನಿಮಾಕ್ಕೆ ಬೆಂಬಲ ನೀಡೇ ನೀಡುತ್ತಾರೆ ಎಂಬ ಭರವಸೆಯಲ್ಲಿ ಸಿನಿಮಾ ರಿಲೀಸ್ ಮಾಡಿದ್ವಿ. ಆ ಭರವಸೆ ನಿಜವಾಗಿದ್ದು ಜನ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದರಿಂದ ಬೇರೆ ಸಿನಿಮಾ ಬಿಡುಗಡೆಗೂ ಧೈರ್ಯ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಪ್ರಸನ್ನ ಬೈಲೂರು ಸಂಭಾಷಣೆ, ಜೋಯೆಲ್ ರೆಬೆಲೊ, ಡ್ಯಾರೆಲ್ ಮಸ್ಕರ್ಯಾನ್ಸ್ ಸಂಗೀತ ಹಾಗೂ ಡ್ಯಾರೆಲ್ ಮಸ್ಕರ್ಯಾನ್ಸ್ ಹಿನ್ನೆಲೆ ಸಂಗೀತ, ನಿರಂಜನ್ ದಾಸ್ ಛಾಯಾಗ್ರಹಣ, ರಾಹುಲ್ ವಸಿಷ್ಠ ಸಂಕಲನ, ರೂಪೇಶ್ ಶೆಟ್ಟಿ ಮತ್ತು ಸುಮನ್ ಸುವರ್ಣ ಸಾಹಿತ್ಯ `ಗಮ್ಜಾಲ್’ ಚಿತ್ರಕ್ಕಿದೆ. ಕರೀಶ್ಮಾ ಅಮೀನ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಪ್ರಸನ್ನ ಬೈಲೂರು, ಸಂದೀಪ್ ಶೆಟ್ಟಿ ಮಣಿಬೆಟ್ಟು, ಉಮೇಶ್ ಮಿಜಾರ್, ವಿಶ್ವನಾಥ್ ಅಸೈಗೊಳಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಒಟ್ಟಿನಲ್ಲಿ `ಗಮ್ಜಾಲ್’ ಸಿನಿಮಾ ಯಶಸ್ಸು ತುಳು ಚಿತ್ರರಂಗದ ಸಿನಿಮಾ ಚಟುವಟಿಕೆಗಳಿಗೆ ಹೊಸ ಹುರುಪು ಹಾಗೂ ಭರವಸೆಯನ್ನು ನೀಡಿದೆ ಎಂದರೆ ಅದು ತಪ್ಪಾಗಲಾರದು.