– ಇದ್ದ ಕೆಲಸವನ್ನೂ ಕಿತ್ಕೊಂಡ ಕೊರೊನಾ
– ಜೀವನ ನಿರ್ವಹಣೆಗಾಗಿ ಮಗು 45 ಸಾವಿರಕ್ಕೆ ಮಾರಾಟ
ಭುವನೇಶ್ವರ: ಜೀವನ ನಿರ್ವಹಣೆಗಾಗಿ 15 ದಿನದ ಹೆಣ್ಣು ಮಗುವನ್ನು ತಂದೆ ಮಾರಾಟ ಮಾಡಿರುವ ಘಟನೆ ಅಸ್ಸಾಂ ರಾಜ್ಯದ ಕೊಕ್ರಾಝಾರ್ ಜಿಲ್ಲೆಯಲ್ಲಿ ನಡೆದಿದೆ.
ದೀಪಕ್ ಬ್ರಹ್ನಾ ಮಗುವನ್ನು ಮಾರಿದ ತಂದೆ. ಗುಜರಾತಿನಲ್ಲಿ ಕೆಲಸ ಮಾಡಿಕೊಂಡಿದ್ದ ದೀಪಕ್ ಲಾಕ್ಡೌನ್ ಆಗಿದ್ದರಿಂದ ಸ್ವಗ್ರಾಮಕ್ಕೆ ಆಗಮಿಸಿದ್ದನು. ಗ್ರಾಮಕ್ಕೆ ಬಂದ್ರೂ ದೀಪಕ್ ಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಕಳೆದ ದಿನಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈ ಪರಿಸ್ಥಿತಿಯಲ್ಲಿ 15 ದಿನಗಳ ಹಿಂದೆ ದೀಪಕ್ ಪತ್ನಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
Advertisement
Advertisement
ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಹುಟ್ಟಿದ ಮಗುವಿನ ಆರೈಕೆ ಕುಟುಂಬಕ್ಕೆ ಕಷ್ಟವಾಗಿತ್ತು. ಹೀಗಾಗಿ ದೀಪಕ್ ತನ್ನ 15 ದಿನದ ಮಗಳನ್ನು ಇಬ್ಬರು ಮಹಿಳೆಗೆ ಮಾರಿದ್ದನು. ಶುಕ್ರವಾರ ಎನ್ಜಿಓ ವೊಂದರ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ದೀಪಕ್ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ನಿಧಾನ್ ಎನ್ಜಿಓ ಅಧ್ಯಕ್ಷ ದಿಗಂಬರ್ ನರ್ಜರಿ, ಲಾಕ್ಡೌನ್ ಆಗಿದ್ದರಿಂದ ಗುಜರಾತಿನಲ್ಲಿ ಕೆಲಸ ಮಾಡಿಕೊಂಡಿದ್ದ ದೀಪಕ್ ಸ್ವಗ್ರಾಮಕ್ಕೆ ಹಿಂದಿರುಗಿದ್ದನು. ಗ್ರಾಮದಲ್ಲಿ ದೀಪಕ್ ನಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. 15 ದಿನಗಳ ಹಿಂದೆ ದೀಪಕ್ ಎರಡನೇ ಹೆಣ್ಣು ಮಗುವಿಗೆ ತಂದೆಯಾಗಿದ್ದನು. ಜೀವನ ನಿರ್ವಹಣೆಗೆ ಹಣವಿಲ್ಲದೇ ಅಸಹಾಯಕನಾಗಿದ್ದ ದೀಪಕ್ ಮಗುವನ್ನು ಮಾರಲು ನಿರ್ಧರಿಸಿದ್ದನು. ಪತ್ನಿಗೆ ವಿಷಯ ತಿಳಿಸದೇ ಮಗುವನ್ನು ಇಬ್ಬರು ಮಹಿಳೆಯರಿಗೆ 45 ಸಾವಿರ ರೂಪಾಯಿಗೆ ಮಾರಿದ್ದನು ಎಂದು ಹೇಳಿದ್ದಾರೆ.