ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಜಿ.ಟಿ.ದೇವೆಗೌಡ ಸವಾಲು ಹಾಕಿದ್ದು, ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸಿ. ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡಿ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಹುಲಿ ಆಗಲ್ಲ ಎಂದಿದ್ದಾರೆ.
Advertisement
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿಮಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀವೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ವ್ಯವಸ್ಥೆಯ ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ ಎಂದರು.
Advertisement
ನೀವು ಪವರ್ ಫುಲ್ ಸಂಸದ. ಪಿಎಂ, ಸಿಎಂ ನೀವು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸಿ. ಇದನ್ನು ಬಿಟ್ಟು ಪೇಪರ್ ಸ್ಟೇಟ್ಮೆಂಟ್ ಕೊಟ್ಟು ಯಾಕೆ ಗೊಂದಲ ಮೂಡಿಸುತ್ತೀರಿ. ಜನರು ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದರು.
Advertisement
Advertisement
ಸಾ.ರಾ.ಮಹೇಶ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆ ಬಗ್ಗೆಯೂ ತಿರುಗೇಟು ನೀಡಿದ ಜಿ.ಟಿ.ದೇವೇಗೌಡ ಅವರು, ಒಬ್ಬರು ಮಾತ್ರ ಹೀರೋ, ನಾವೆಲ್ಲಾ ಜೀರೋನಾ? ನಾವೆಲ್ಲ ನಮ್ಮ ಸ್ವಂತ ಹಣ ಖರ್ಚು ಮಾಡುತ್ತಿದ್ದೇವೆ. ಸಂಸದರಾಗಿ ನೀವೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀರಿ ಹೇಳಿ ಪ್ರತಾಪ್ ಸಿಂಹಗೆ ಶಾಸಕ ಜಿ.ಟಿ.ದೇವೆಗೌಡ ತರಾಟೆಗೆ ತೆಗೆದು ಕೊಂಡರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಜನ ಸಾಯುತ್ತಿದ್ದಾರೆ. ಈಗ ಸರ್ಕಾರ ತೆಗೆಯಲು ಹೋಗಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ. ಕೊರೊನಾ ಬಂದು ರಾಜ್ಯದ ತುಂಬಾ ಜನ ಸಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ, ಇದು ನಿಜಕ್ಕೂ ಮೂರ್ಖತನ. ಈ ಸಂದರ್ಭದಲ್ಲಿ ದೆಹಲಿಗೆ ಹೋಗುವ ಅಗತ್ಯತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಯಡಿಯೂರಪ್ಪನವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡಿ, ಸರ್ಕಾರ ಬೀಳಿಸಲು ಪ್ರಯತ್ನ ಮಾಡಿರೋದು ಸರಿಯಲ್ಲ ಎಂದು ಕಿಡಿಕಾರಿದರು.