ಮಡಿಕೇರಿ: ಮೂರು ವರ್ಷದ ಹಿಂದೆ ಕಳೆದು ಹೋಗಿದ್ದ ಮಾನಸಿಕ ಅಸ್ವಸ್ಥ ತಾಯಿ ಈಗ ಮತ್ತೆ ಮಗನಿಗೆ ಸಿಕ್ಕಿರುವ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹೆತ್ತವ್ವನ ಹುಡುಕಿಕೊಂಡು ಹಾತೊರೆದು ಬರುತ್ತಿರುವ ಎದೆಯುದ್ದದ ಮಗ. ಎಲ್ಲಿದ್ದಾಳೋ, ಹೇಗಿದ್ದಾಳೋ ಎಂದು ತನ್ನ ಹಡೆದವ್ವನಿಗಾಗಿ ಮಮ್ಮಲ ಮರುಗುತ್ತಿರುವ ದೃಶ್ಯ. ಹೌದು ಮೂರು ವರ್ಷಗಳಿಂದ ತಾಯಿಗಾಗಿ ಹಾತೊರೆಯುತ್ತಿದ್ದ ಮಗನ ಕರುಳ ಹಿಂಡುವ ಕರುಣಾಜನಕ ದೃಶ್ಯ ಕಂಡಿದ್ದು ಮಡಿಕೇರಿಯಲ್ಲಿ. ಹೀಗೆ ತಾಯಿಯ ಕೈ ಕೈ ಹಿಡಿದು ಈಗಲಾದರೂ ಸಿಕ್ಕಿದೆಯಲ್ಲಾ ಎಂದು ಪೇಚಾಡುತ್ತಿರುವ ಮಗ ಮಹೇಶ್ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದವರು.
Advertisement
Advertisement
ಮಾನಸಿಕ ಅಸ್ವಸ್ಥರಾಗಿ ಊರಿನಿಂದ ತಪ್ಪಿಸಿಕೊಂಡಿದ್ದ ತಾಯಿ ಪಾರ್ವತಿಗಾಗಿ ಹುಡುಕಾಡದ ಊರುಗಳಿಲ್ಲ. ತಾಯಿ ಸಿಕ್ಕರೆ ಸಾಕು ಎಂದು ಹರಕೆ ಕಟ್ಟದ ದೇವರುಗಳಿಲ್ಲ. ಆದರೆ ತಪ್ಪಿಸಿಕೊಂಡ ತಾಯಿ ಮಾತ್ರ ಸಿಕ್ಕಿರಲಿಲ್ಲ. ಅದ್ಹೇಗೋ ಮಡಿಕೇರಿಗೆ ಬಂದಿದ್ದ ಮಾನಸಿಕ ಅಸ್ವಸ್ಥರಾದ ಪಾರ್ವತಿ ಬೀದಿ ಬೀದಿಗಳಲ್ಲಿ ಓಡಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಡಿಕೇರಿ ಪೊಲೀಸರು ತಲನ್ ಸಂಸ್ಥೆಯ ವೃದ್ಧಾಶ್ರಮಕ್ಕೆ ಸೇರಿಸಿದ್ದರು.
Advertisement
ಅಂದಿನಿಂದ ಇವರನ್ನು ಶುಶ್ರೂಷೆ ಮಾಡುತ್ತಾ ಚಿಕಿತ್ಸೆ ನೀಡುತ್ತಿದ್ದ ತನಲ್ ಸಂಸ್ಥೆ, ಇವರ ಹೆಸರು ಗೊತ್ತಾಗದೆ ಜಲಜಾ ಎನ್ನೋ ಹೆಸರಿಟ್ಟು ಸಲಹುತಿದ್ದರು. ತಮ್ಮ ನಿಯಮದ ಪ್ರಕಾರ ತನಲ್ ಸಂಸ್ಥೆ ಮುಖಂಡರು ಕೊನೆಗೂ ಪಾರ್ವತಿ ಅವರ ವಿಳಾಸ ಹುಡುಕಿ ತಾಯಿ ಮಗನನ್ನು ಒಂದಾಗಿಸಿದ್ದಾರೆ.
Advertisement
ಕಳೆದು ಹೋದ ತಾಯಿಗಾಗಿ ಮೂರು ವರ್ಷಗಳಿಂದ ಹುಡುಕಾಡಿ ಬೇಸತ್ತಿದ್ದ ಮಗ ಮಹೇಶ್, ನಮ್ಮ ಪಾಲಿಗೆ ನಮ್ಮ ತಾಯಿ ಇನ್ನಿಲ್ಲ ಎಂದುಕೊಂಡಿದ್ದರಂತೆ. ಆದರೆ ತನಲ್ ಸಂಸ್ಥೆಯು ಇವರಿಗೆ ಕರೆ ಮಾಡಿ ನಿಮ್ಮ ತಾಯಿ ಇದ್ದಾರೆ ಎಂದು ತಿಳಿಸಿದಾಗ ಹೆತ್ತವ್ವನಿಗಾಗಿ ಹಗಲುರಾತ್ರಿ ಹುಡುಕಾಡುತ್ತಿದ್ದ ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ತನ್ನ ತಾಯಿ ಸಿಕ್ಕಳಲ್ಲಾ ಎಂದು ಸಾಲಿಗ್ರಾಮದಿಂದ ಮಡಿಕೇರಿಗೆ ಬಂದು ಇಂದು ತನ್ನ ತಾಯಿಯನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನನ್ನ ತಾಯಿಯನ್ನು ಇನ್ನೆಂದು ಕಳೆದುಕೊಳ್ಳದಂತೆ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ ಎನ್ನುವಾಗ ಮಹೇಶ್ ಗದ್ಗತಿರಾಗುತ್ತಿದ್ದರು. ಇವರಂತೆಯೇ ತನಲ್ ಸಂಸ್ಥೆಯಲ್ಲಿರುವ ಇನ್ನೂ ಹಲವರು, ಇಂದು ಪಾರ್ವತಿ ಸಂಸ್ಥೆ ಬಿಟ್ಟು ತಮ್ಮ ಮನೆಗೆ ಹೋಗುತ್ತಿದ್ದರೆ, ಹೊರಗೆ ನಿಂತು ಕೈಬೀಸಿ ಬೀಳ್ಕೊಡುತ್ತಿದ್ದರು. ಮತ್ತೊಂದೆಡೆ ನಮ್ಮವರೂ ಯಾರದರೂ ನಮ್ಮನ್ನು ಮನೆಗೆ ಕರೆದೊಯ್ಯಲು ಬರಬಹುದಾ ಎನ್ನೋ ಆಸೆಗಣ್ಣಿನಿಂದಲೇ ದಾರಿ ಎದುರು ನೋಡುತ್ತಾ ನಿಂತಿದ್ದರು.