ಚಿಕ್ಕಮಗಳೂರು: ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 32 ವರ್ಷದ ಯುವಕ ಕೊರೊನಾಗೆ ಬಲಿಯಾಗಿದ್ದು, ಯುವಕನ ಸಾವಿಗೆ ಆರೋಗ್ಯ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ವಾರದ ಹಿಂದಷ್ಟೇ ಯುವಕನ ತಾಯಿ ಸಾವನ್ನಪ್ಪಿದ್ದು, ಇದೀಗ ಮಗ ಕೂಡ ತೀರಿಕೊಂಡಿದ್ದಾರೆ. ಈ ಮೂಲಕ ಒಂದೇ ವಾರದಲ್ಲಿ ಒಂದೇ ಮನೆಯಲ್ಲಿ ಇಬ್ಬರು ಕೋವಿಡ್ 19ಗೆ ಬಲಿಯಾದಂತಾಗಿದೆ. ಲಿಂಗದಹಳ್ಳಿಯ ವೃದ್ಧ ದಂಪತಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಜುಲೈ 17ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 6 ದಿನಗಳ ಹಿಂದೆ ವೃದ್ಧೆ ಹಾಗೂ ಮೃತ ಯುವಕನ ತಾಯಿ ಸಾವನ್ನಪ್ಪಿದ್ದರು.
Advertisement
Advertisement
ಮೃತ ಯುವಕನ ತಂದೆ ಕೂಡ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಕೊರೊನಾದಿಂದ ಮಗ ಕೂಡ ಸಾವನ್ನಪ್ಪಿದ್ದಾನೆ. ವೃದ್ಧ ದಂಪತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ವಾರದ ಹಿಂದೆಯೇ ಕುಟುಂಬಸ್ಥರ ಸ್ವಾಬ್ ಕಲೆಕ್ಟ್ ಮಾಡಿಕೊಂಡಿದ್ದರು. ಆದರೆ ವರದಿ ಬಂದಿರಲಿಲ್ಲ. ಶನಿವಾರ ರಾತ್ರಿಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಯುವಕನಿಗಾಗಿ ಸ್ಥಳೀಯರು ಭಾನುವಾರ ಬೆಳಗ್ಗೆಯಿಂದಲೇ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬಂದದ್ದು ಮಾತ್ರ ಮಧ್ಯಾಹ್ನ 1 ಗಂಟೆಗೆ. ಅದರಲ್ಲೂ ವೆಂಟಿಲೇಟರ್ ಇರಲಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಯುವಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ವರದಿ ಬೇಗ ಬಂದಿದ್ದರೆ ಯುವಕನನ್ನ ಉಳಿಸಬಹುದಿತ್ತು ಅಥವಾ ಅಂಬುಲೆನ್ಸ್ ಬೆಳಗ್ಗೆ ಬಂದಿದ್ದರೂ ಯುವಕ ಬದುಕುಳಿಯುತ್ತಿದ್ದನೋ ಏನೋ. ಯುವಕನ ಸಾವಿನ ಬಳಿಕ ಸಿಬ್ಬಂದಿ ಯುವಕನಿಗೆ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರಂತೆ. ಆದರೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅಮಾಯಕ ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯರು ಗರಂ ಆಗಿದ್ದಾರೆ. ಇಂದು ಮೃತನ ಮನೆಗೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದಾರೆ.