ಬೆಂಗಳೂರು: ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಚಟುವಟಿಕೆಗೆ ನಿಬರ್ಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು.
Advertisement
Advertisement
ಅನ್ ಲಾಕ್ ಬಗ್ಗೆ ಯಾವುದೇ ಗೊಂದಲ ಇಲ್ಲ. ಮಹಾರಾಷ್ಟ್ರದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್ ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ನುಡಿದರು.
Advertisement
Advertisement
ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣಗಳಿದ್ದು, 1,948 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, 102 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಪಾಸಿಟಿವಿಟಿ ರೇಟ್ ಶೇ.6.68ಕ್ಕೆ ಇಳಿಕೆ, 20,246 ಡಿಸ್ಚಾರ್ಜ್- 10,959 ಹೊಸ ಕೊರೊನಾ ಕೇಸ್, 192 ಸಾವು
ತಪ್ಪಿತಸ್ಥರ ರಕ್ಷಣೆ ಇಲ್ಲ: ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್ಗೆ ಭೇಟಿ ನೀಡಿದ್ದಾಗ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಲಾಗಿತ್ತು. ವರದಿ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನನ್ನ ಬಳಿ ವರದಿ ಬಂದ ಕೂಡಲೇ ಕ್ರಮ ವಹಿಸುತ್ತೇನೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ವೈದ್ಯರು ಆಸ್ಪತ್ರೆಯಿಂದ ಹೊರಗೆ 100 ಮೀಟರ್ ದೂರ ಹೋದ ಕೂಡಲೇ ಗೊತ್ತಾಗುವಂತೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಲಾಗುವುದು. ಪ್ರತಿ ಆಸ್ಪತ್ರೆಯ ವಾರ್ಡ್, ಐಸಿಯುನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಒಂದೇ ಕಡೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಆಕ್ಸಿಜನ್ ಸಾಂದ್ರಕ ಕೊಡುಗೆ: ಹರ್ಬಲೈಫ್ ನ್ಯೂಟ್ರೀಶಿಯನ್ ಕಂಪನಿಯು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 150 ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ. ಸಪ್ತ ಸಚಿವರ ನಿವಾಸದಲ್ಲಿ ಸಚಿವರನ್ನು ಭೇಟಿಯಾದ ಕಂಪನಿಯ ಪ್ರತಿನಿಧಿಗಳು ಕಾನ್ಸಂಟ್ರೇಟರ್ಗಳನ್ನು ಹಸ್ತಾಂತರಿಸಿದರು. ಇದನ್ನು ಓದಿ: ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ