– ನಾವೂ ಅಪ್ಪ, ಅಮ್ಮನಿಗೆ ಹುಟ್ಟಿರುವ ಮಕ್ಕಳೇ
– ನಾನು ಹಾಸನದಲ್ಲೇ ಹುಟ್ಟಿರುವ ಮಗ
ಹಾಸನ: ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ತಂದೆ- ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಸಾಧ್ಯವಾಗಲ್ಲ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
Advertisement
ಜಮೀನು ವಿಚಾರವಾಗಿ ಗ್ರಾಮಸ್ಥರು ಮತ್ತು ಯಶ್ ಹೆತ್ತವರ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಯಶ್ ಅವರು ಇಂದು ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಬಳಿಕ ಘಟನೆ ಬಗ್ಗೆ ತಮ್ಮ ಬೆಂಬಲಿಗರಿಂದ ಮಾಹಿತಿ ಪಡೆದರು.
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಕಿಂಗ್ ಸ್ಟಾರ್, ಸೆಲೆಬ್ರಿಟಿ ಆದವರಿಗೆ ಶಾಪ. ನಮ್ಮ ಹಣೆಬರಹ. ನಮ್ಮ ಬಗ್ಗೆ ಯಾರಾದ್ರು ಏನಾದ್ರು ಹೇಳಿದ್ರೆ ನೀವು ಹಾಕ್ತೀರಾ. ಅದನ್ನ ನೋಡಿ ನಾವು ತಿಳಿದುಕೊಳ್ಳಬೇಕು. ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಏನೇನೋ ಮಾಡ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಅಲ್ಲದೆ ಕೆಲಸ ಮಾಡುವವರು ಕೂಡ ನಮ್ಮ ಮನೆಯವರಂತೆ. ಆ ಹುಡುಗರ ಮೇಲೆ ಕೈ ಮಾಡಿದ್ರೆ ಹೇಗೆ..? ಅದಕ್ಕಾಗಿ ಬಂದು ಈಗ ಮಾತನಾಡುತ್ತಿದ್ದೇನೆ ಎಂದರು.
Advertisement
ರಸ್ತೆ ವಿಚಾರ ಮಾತನಾಡುತ್ತಾರೆ. ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ಏನಾದ್ರು ಒಂದು ಎಕ್ಸಾಂಪಲ್ ಸೆಟ್ ಮಾಡಲು ಜಮೀನು ಮಾಡಿದ್ದೇವೆ. ಬೇಕಾದ್ರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ..? ನಮ್ಮ ತಂದೆ-ತಾಯಿಯೂ ಹಳ್ಳಿ ಜನ ಅವರೂ ಮಾತನಾಡ್ತಾರೆ, ಇವರೂ ಮಾತನಾಡ್ತಾರೆ. ಯಾವ ರೀತಿ ಮಾತನಾಡಬೇಕು ಆ ರೀತಿ ಮಾತನಾಡಬೇಕು ಎಂದು ಯಶ್ ಹೇಳಿದರು.
ಮೀಡಿಯಾ ಇದೆ ಅಂತಾರೆ, ಎಲ್ಲರದ್ದೂ ಇದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ-ಅಮ್ಮನಿಗೆ ಹುಟ್ಟಿರುವ ಮಕ್ಕಳೇ. ತಂದೆ-ತಾಯಿಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತಾ ಹೇಳ್ತಾರಂತೆ. ನಾನು ಹಾಸನದಲ್ಲೇ ಹುಟ್ಟಿರುವ ಮಗ. ನಮ್ಮ ತಂದೆ-ತಾಯಿ ಹಾಸನದಲ್ಲಿ ಹುಟ್ಟಿದವರು. ಹಾಸನ, ಬೆಳಗಾವಿ, ಮಂಗಳೂರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ಮಾಡ್ತೀನಿ. ಬಣ್ಣ ಕಟ್ಟುತ್ತಾರೆ, ದಯವಿಟ್ಟು ನಂಬಬೇಡಿ ಎಂದು ರಾಕಿಂಗ್ ಸ್ಟಾರ್ ಮನವಿ ಮಾಡಿಕೊಂಡರು.
ಬಡವರಿಗೆ ಉಪಯೋಗ ಆಗುತ್ತೆ ಎಂದು ಹತ್ತು ಎಕರೆ ಜಾಗ ತಗೊಂಡೆ. ಯಾರಿಗಾದ್ರು ಬೇಕಾ..? ಸರ್ಕಾರಿ ಶಾಲೆ, ಜನರ ಉಪಯೋಗಕ್ಕೆ ಕೇಳಿದ್ರೆ ನಾನೇ ಬಿಟ್ಟು ಕೊಡ್ತೇನೆ. ಆಸ್ತಿ, ಜಮೀನು ದೊಡ್ಡ ವಿಷಯವಲ್ಲ. ಅವರು ಹೇಳಿದ್ದೆಲ್ಲ ಸತ್ಯ ಅನ್ಕೊಂಡ್ರೆ ಹೇಗೆ ಎಂದು ಯಶ್ ಪ್ರಶ್ನಿಸಿದರು.
ಇತ್ತ ಯಶ್ ಬರುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಠಾಣೆ ಮುಂದೆ ಅಭಿಮಾನಿಗಳು ಮುಗಿಬಿದ್ದರು. ಹೀಗಾಗಿ ಪೊಲೀಸ್ ಠಾಣೆಯ ಮುಂಬಾಗಿಲ ಗೇಟ್ ಹಾಕಿ ಅಭಿಮಾನಿಗಳನ್ನು ಪೊಲೀಸರು ತಡೆದರು. ಕೆಲವರು ರೈತ ವಿರೋಧಿ ಎಂದು ಯಶ್ಗೆ ಧಿಕ್ಕಾರ ಕೂಗಿದರೆ. ಮತ್ತೆ ಕೆಲವರು ಯಶ್ಗೆ ಜೈಕಾರ ಕೂಗಿದರು.