– ಬೈಕ್ ಹುಡುಕಿಕೊಡಿಯೆಂದು ಪೇದೆಯಿಂದ ದೂರು
ಶಿವಮೊಗ್ಗ: ಫೈನ್ ಕಟ್ಟಲು ಠಾಣೆಗೆ ಬಂದ ಕಳ್ಳರು ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಅವರು ಬೈಕ್ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ
ರಸ್ತೆಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಇಬ್ಬರು ಯುವಕರನ್ನು ತಡೆದು ನಿಲ್ಲಿಸಿದ ಪೊಲೀಸರು ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ನಮ್ಮ ಬಳಿ ದಂಡ ಕಟ್ಟಲು ಹಣವಿಲ್ಲ ಎಂದ ಯುವಕರನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ವಿಚಾರಣೆ ನಡೆಸಿ, ಇನ್ನು ಮುಂದೆ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿ ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ.
Advertisement
Advertisement
ಆದರೆ ವಿಚಾರಣೆ ಮುಗಿಸಿ ವಾಪಸ್ ಹೋಗುವಾಗ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸರ ಬೈಕ್ ಕಳ್ಳರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಠಾಣೆಯ ಸಮೀಪದಲ್ಲಿದ್ದ ಅಂಗಡಿಯೊಂದಕ್ಕೆ ಹೋದ ಯುವಕರು ನಮ್ಮ ಬೈಕ್ ಕೀ ಕಳೆದು ಹೋಗಿದೆ. ಲಾಕ್ ಓಪನ್ ಮಾಡಬೇಕು ಎಂದು ಬೇರೆ ಕೀ ಕೇಳಿದ್ದಾರೆ. ಅಲ್ಲಿಂದ ಬೇರೆ ಕೀ ತಂದು ಠಾಣೆಯಲ್ಲಿ ನಿಲ್ಲಿಸಿದ್ದ ಕಾನ್ಸ್ ಟೇಬಲ್ ಒಬ್ಬರ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ.
Advertisement
Advertisement
ತನ್ನ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಅಣಿಯಾದ ಪೊಲೀಸ್ ಕಾನ್ಸ್ ಟೇಬಲ್ ಗೆ ಬೈಕ್ ಕಳೆದು ಹೋಗಿರುವುದು ಗಮನಕ್ಕೆ ಬಂದಿದೆ. ನಂತರ ಠಾಣೆಯ ಸುತ್ತಮುತ್ತ ಬೈಕಿಗಾಗಿ ಹುಡುಕಾಟ ನಡೆಸಿದ್ದಾರೆ. ಬೈಕ್ ಸಿಗದ ಕಾರಣ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಅವರು ಠಾಣೆಯಲ್ಲಿ ನಿಲ್ಲಿಸಿದ್ದ ಹೊಂಡಾ ಫ್ಯಾಷನ್ ಪ್ಲಸ್ ಬೈಕ್ ಅನ್ನು ಕಳವು ಮಾಡಿದ್ದಾರೆ ಎಂದು ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ತನ್ನ ಬೈಕನ್ನು ಪತ್ತೆ ಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.