ಕೀಳರಿಮೆ, ಪ್ರಯತ್ನ ಪಡಲು ಬೇಕಾದ ಪರಿಶ್ರಮದ ಅಭಾವ ಅದೆಷ್ಟೋ ಜನರನ್ನ ಎಲ್ಲೆಲ್ಲೋ ಅಮುಕಿಬಿಟ್ಟಿದೆ. ಯಾವುದೇ ರೀತಿಯ ಗೆಲುವು ಬಡಪೆಟ್ಟಿಗೆ ದಕ್ಕೋದಿಲ್ಲ. ಯಾರೋ ಮಾಡಿಟ್ಟ ರಸ್ತೆಯಲ್ಲಿ ಹೆಜ್ಜೆಯಿರಿಸಿ ಗೆದ್ದೇ ಅಂತ ಬೀಗಿದರೆ ಅದಕ್ಕೆ ಕಿಲುಬುಗಾಸಿನ ಕಿಮ್ಮತ್ತೂ ಇಲ್ಲ. ಸಾಧನೆ ಹಾದಿಯಲ್ಲಿ ಮುಗ್ಗರಿಸಬೇಕಾಗುತ್ತೆ. ಮೈ-ಕೈ ತುಂಬಾ ತರಚು ಗಾಯಗಳಾಗುತ್ತವೆ. ಆ ನೋವು ಮನಸಿಗೂ ವ್ಯಾಪಿಸಿ ಕಂಗಾಲಾಗುವಂತಾಗುತ್ತೆ. ಇನ್ನೇನು ಯಾವ ಶಕ್ತಿಯೂ ತನ್ನನ್ನು ಈ ಹುದುಲಿಂದ ಮೇಲೆತ್ತಲಾಗೋದಿಲ್ಲ ಅನ್ನಿಸುವಂತಹ ಸೋಲುಗಳೆದುರಾಗುತ್ತವೆ.
Advertisement
ಇಷ್ಟೆಲ್ಲವನ್ನೂ ಅನುಭವಿಸದ ಗೆಲುವೊಂದು ಗೆಲುವೇ ಅಲ್ಲ. ಯಾರೋ ಕೂಡಿಟ್ಟ ಕಾಸಲ್ಲಿ ತಮ್ಮ ಕನಸಿನಸೌಧ ಕಟ್ಟುವವರು, ಬೇರೆಯವರ ಸಮಾಧಿಯ ಮೇಲೆ ಈಸಿ ಚೇರು ಹಾಕಿ ಕುಕ್ಕರಿಸುವವರು ಸಹಸ್ರ ಸಂಖ್ಯೆಯಲ್ಲಿ ಸಿಕ್ಕಾರು. ಆದರೆ ಜಗತ್ತಿನ ಗೆಲುವ ಯಾದಿಯಲ್ಲಿ ದಾಖಲಾಗೋದು, ಬಾಳಿಕೆ ಬರೋದು ಪರಿಶ್ರಮಕ್ಕೆ ದಕ್ಕಿದ ಗೆಲುವು ಮಾತ್ರ. ನೀವು ಯಾವುದೇ ಕ್ಷೇತ್ರದಲ್ಲಿ ಗೆದ್ದ ಯಾರನ್ನೇ ಆದರೂ ಕೇಳಿ ನೋಡಿ; ಅವರ ಮೈ ಮನಸುಗಳಲ್ಲಿ ಸಾವಿರ ನೋವಿನ ಕಥೆ ಇದ್ದೇ ಇರುತ್ತೆ.
Advertisement
Advertisement
ಸದ್ಯ ನಾವೀಗ ಹೇಳ ಹೊರಟಿರೋದು ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಅಮೆರಿಕ ಮೂಲದ ಗಾಯಕನ ಬಗ್ಗೆ. ಆತ ಎಲ್ವಿಸ್ ಆರನ್ ಪ್ರೀಸ್ಲಿ. ಅಮೆರಿಕದ ಸಂಗೀತಾಸಕ್ತರು ಮತ್ತು ಸಿನಿಮಾ ಪ್ರೇಮಿಗಳ ಪಾಲಿಗೆ ಆರಾಧ್ಯದೈವ. ಎಪ್ಪತ್ತರ ದಶಕದಲ್ಲಿಯೇ ಇಲ್ಲವಾದರೂ ಈವತ್ತಿಗೂ ಆತನ ಪ್ರಭಾವ ಮಂಕಾಗಿಲ್ಲ. ಸಂಗೀತ ಕ್ಷೇತ್ರದಲ್ಲಿ ದಿ ಕಿಂಗ್ ಅಂತ ಕರೆಸಿಕೊಳ್ಳೋ ಆತ ನಡೆದು ಬಂದ ಹೆಜ್ಜೆಗಳನ್ನ ಗಮನಿಸಿದರೆ ಯಾರಿಗೇ ಆದರೂ ಅಚ್ಚರಿಯಾಗದಿರೋದಿಲ್ಲ.
Advertisement
ಎಲ್ವಿಸ್ ಸಾಮಾನ್ಯ ಕುಟುಂಬದಿಂದ ಬಂದಿದ್ದ ಹುಡುಗ. ಆತನಿಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕನ್ನೋ ಬಯಕೆ. ಹೇಗೇಗೋ ಮಾಡಿ ಸಂಗೀತ ಸಾಧಕರನ್ನ ಭೇಟಿಯಾಗಿ ಹಾಡೋ ಪ್ರಯತ್ನ ಮಾಡಿದ್ರೂ ಆತನಿಗೆ ಪದೇ ಪದೆ ಸೋಲೆದುರಾಗ್ತಿತ್ತು. ಆದ್ರೆ ಮತ್ತೆ ಮತ್ತೆ ಪ್ರಯತ್ನಿಸ್ತಾ ಟ್ರಕ್ ಡ್ರೈವರ್ ಆಗಿ ತುತ್ತಿನ ಚೀಲ ತುಂಬಿಸಿಕೊಳ್ತಿದ್ದ. ಆದರೆ ನೂರಾರು ಸಲ ಪ್ರಯತ್ನ ಪಟ್ಟರೂ ಯಾರೆಂದರೆ ಯಾರೂ ಅವನಿಗೆ ಅವಕಾಶ ಕೊಟ್ಟಿರಲಿಲ್ಲ. ಒಂದು ಸಲವಂತೂ `ನೀನು ಟ್ರಕ್ ಓಡಿಸೋಕೇ ಲಾಯಕ್ಕು, ಹಾಡೋ ಪ್ರಯತ್ನ ಮಾಡ್ಬೇಡ’ ಅಂತ ನೇರವಾಗಿಯೇ ಮೂದಲಿಸಿದ್ದರಂತೆ.
ಯಾರೇ ಆದ್ರೂ ಇದರಿಂದ ಕುಸಿದು ಬಿಡ್ತಿದ್ರು. ಮತ್ತೆಂದೂ ಹಾಡೋ ಅವಕಾಶಕ್ಕಾಗಿ ಪ್ರಯತ್ನವನ್ನೇ ಮಾಡ್ತಿರಲಿಲ್ಲವೇನೋ. ಆದರೆ ಎಲ್ವಿಸ್ ಟ್ರಕ್ ಓಡಿಸುತ್ತಲೇ ಮತ್ತೆ ಮತ್ತೆ ಪ್ರಯತ್ನಿಸಿದ. ಕಡೆಗೂ ಒಂದಿನ ಹಾಡೋ ಅವಕಾಶ ಗಿಟ್ಟಿಸಿಕೊಂಡಿದ್ದ. ಆ ನಂತರ ಯಾವ ಥರ ಬೆಳೆದನೆಂದರೆ, ವಿಶ್ವಾದ್ಯಂತ ಸಂಗೀತ ಪ್ರೇಮಿಗಳನ್ನ ಹುಚ್ಚೆಬ್ಬಿಸಿದ. ಆತ ಮರೆಯಾಗಿ ದಶಕಗಳೇ ಕಳೆದರೂ ಜನ ಇನ್ನೂ ಅವನನ್ನು ನೆನಪಿಟ್ಟುಕೊಂಡಿದ್ದಾರೆ. ಆತ ಅಮೆರಿಕಾದಲ್ಲಿ ಈವತ್ತಿಗೂ ದಿ ಕಿಂಗ್ ಅನ್ನೋ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾನೆ.