– ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ
– ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ವಾಗ್ದಾಳಿ
– ಬಿಎಸ್ವೈ ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ
ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಭಾರತಕ್ಕೆ ಕರೆದುಕೊಂಡು ಬಾರದಿದ್ದರೆ ಕೊರೊನಾ ವೈರಸ್ ಹೆಚ್ಚಾಗುತ್ತಿರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಕೃಪ ನಂಬರ್ 1 ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹಬ್ಬಿದ್ದನ್ನು ತಬ್ಲಿಘಿಗಳ ಮೇಲೆ ಡೈವರ್ಟ್ ಮಾಡಲಾಯಿತು. ಅಮೆರಿಕ, ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ತಬ್ಲಿಘಿಗಳು ಇದ್ರಾ? ಕೊರೊನಾ ಸಂಕಷ್ಟದ ಸಮಯದಲ್ಲೂ ರಾಜಕೀಯ ಮಾಡಿದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.
Advertisement
Advertisement
ದೇಶದಲ್ಲಿ ಮಾರ್ಚ್ 1ರಿಂದಲೇ ವಿಮಾನ ಸಂಪೂರ್ಣ ಬಂದ್ ಮಾಡಬೇಕಿತ್ತು. ತಬ್ಲಿಘಿಗಳಿಗೆ ಯಾಕೆ ಸಮಾವೇಶ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದರು. ಕೇಂದ್ರ ಸರ್ಕಾರದ ಗುಪ್ತಚರ ಏನಾಗಿತ್ತು? ಇಲ್ಲಿನ ತಬ್ಲಿಘಿಗಳಿಗೆ ಬೇರೆ ದೇಶದಿಂದ ಬಂದವರಿಂದ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದರು.
Advertisement
ನರೇಂದ್ರ ಮೋದಿ ಅವರು 2019ರ ಮೇ 30ರಲ್ಲಿ ಎರಡನೇ ಅವಧಿಗೆ ಪ್ರಧಾನಿಯಾದರು. ದೇಶದ ಜನ ಅವರಿಗೆ ಎರಡನೇ ಅವಧಿಗೂ ಅವಕಾಶ ಕಲ್ಪಿಸಿದ್ದಾರೆ. ಮೊದಲ ಅವಧಿಯಲ್ಲಿ ಅವರ ಆಡಳಿತ ಸಂಪೂರ್ಣವಾಗಿ ವೈಪಲ್ಯವನ್ನು ಕಂಡಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಕೆಲಮಟ್ಟಕ್ಕೆ ಹೋಗಿತ್ತು. ಮೊದಲ 5 ವರ್ಷದಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಸುಳ್ಳುಗಳನ್ನು ಹೇಳುತ್ತಿದ್ದರು. 6ನೇ ವರ್ಷದಲ್ಲೂ ಕೂಡ ಅವರ ಸುಳ್ಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ ಎಂದು ವಾಗ್ದಾಳಿ ನಡೆಸಿದರು.
Advertisement
ಕೋವಿಡ್ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಮಾರ್ಚ್ 8ರಂದು ಕರ್ನಾಟಕದಲ್ಲಿ ಮೊದಲ ಕೇಸ್ ಬಂದಿತ್ತು. ನಮ್ಮ ರಾಜ್ಯಕ್ಕೆ ಪಿಪಿಇ ಕಿಟ್ ಯಾವಾಗ ಬಂತು? ಹತ್ತು ಲಕ್ಷದಲ್ಲಿ ಹತ್ತು ಸಾವಿರ ಜನರಿಗೆ ಟೆಸ್ಟ್ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದೇಶದಲ್ಲಿ 2,800, ರಾಜ್ಯದಲ್ಲಿ 4,100 ಜನರಿಗೆ ಮಾತ್ರ ಟೆಸ್ಟ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ನಂಬರ್ 1 ಅಂತ ಹೇಳುತ್ತಿದ್ದಾರೆ. ಆದರೆ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಪಿಪಿಇ ಕಿಟ್ ಕೊಡಿ ಅಂದ್ರೆ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಅಂತಾರೆ. ಇದು ಅವರ ಸಾಧನೆ ಎಂದು ದೂರಿದರು.
ಲಾಕ್ಡೌನ್ ಆಗಿ ಕೆಲಸವೇ ಇಲ್ಲದವರಿಗೆ ದುಡ್ಡು ಎಲ್ಲಿಂದ ಬರುತ್ತದೆ? ವೃತ್ತಿಪರ ಸಮುದಾಯಕ್ಕೆ 10 ಸಾವಿರ ರೂ. ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ ಅವರು ಮಾಡಿದ್ದೇನು? ಏನು ಮಾಡಲಿಲ್ಲ ಎಂದು ಕಿಡಿಕಾರಿದರು.
ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಆಯ್ತು. ಪ್ರವಾಹ ಸಂತ್ರಸ್ಥರಿಗೆ ಮನೆ ಕಟ್ಟಿಕೊಟ್ಟಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಿಲ್ಲ. ಒಂದು ಲಕ್ಷ ಕೋಟಿ ನಷ್ಟ ಆಗಿತ್ತು. ಒಂದು ಸರ್ವೇ ಕೂಡ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕೇಳುವ ಧೈರ್ಯ ಸಿಎಂ ಅವರಿಗೆ ಇದೆಯಾ ಎಂದು ಪ್ರಶ್ನಿಸಿದರು.
ಸಿಎಂ ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ. ಮುಖ್ಯಮಂತ್ರಿ ಮಾತ್ರ ಅಂತ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರು ನಾಯಕರಲ್ಲ ಅಂತ ಒಪ್ಪಿಕೊಂಡಿಲ್ಲ. ಅವರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿಯವರ ಆಂತರಿಕ ಕಚ್ಚಾಟದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದರು.
ಮಾಜಿ ಸಚಿವ ಉಮೇಶ್ ಕತ್ತಿ ನನ್ನ ಸ್ನೇಹಿತ. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ನಾನು ಡಿಸಿಎಂ, ಅವರು ಲೋಕೋಪಯೋಗಿ ಸಚಿವರಾಗಿದ್ದರು. ಹಾಗಾಗಿ ನಮ್ಮಿಬ್ಬರ ಸ್ನೇಹ ಚೆನ್ನಾಗಿದೆ. ಉಮೇಶ್ ಕತ್ತಿ ನನ್ನ ಭೇಟಿಯಾಗಿಲ್ಲ. ಇಂತಹ ಭ್ರಷ್ಟ ಸರ್ಕಾರ ಹೋಗಬೇಕು. ಅವತ್ತು ಪ್ರಧಾನಿ ಮೋದಿ ಶೇ.10 ಸರ್ಕಾರ ಅಂತ ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತು ಎಷ್ಟು ಪರ್ಸೆಂಟ್ ಸರ್ಕಾರ ಎನ್ನುವುದನ್ನ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಈ ಕೆಟ್ಟ ಸರ್ಕಾರ ಇರಬಾರದು, ಹೋಗಬೇಕು ಎಂದು ಗುಡುಗಿದರು.
ಬಿಜೆಪಿ ಅಸಮಾಧಾನ ಶುರುವಾಗಿದೆ. ಹೀಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿದ್ದಾರೆ. ಅವರ ಜೊತೆಗೆ ಮಹೇಶ್ ಕುಮಟಳ್ಳಿ ಬಿಟ್ರೆ ಬೇರೆ ಯಾರು ಹೋಗಲಿಲ್ಲ. ಆದ್ರೆ ಕುಮಟಳ್ಳಿ ಅವರನ್ನು ಮಂತ್ರಿ ಮಾಡಲಿಲ್ಲ. ಈ ಸರ್ಕಾರ ಬಿಜೆಪಿ ಅವರಿಂದಲೇ ಬೀಳುವ ಸಾಧ್ಯತೆ ಇದೆ. ಸರ್ಕಾರ ಬಿದ್ರೆ ನಮ್ಮ ಕೈವಾಡ ಇರಲ್ಲ. ಇಷ್ಟೊಂದು ಕೆಟ್ಟ ಭ್ರಷ್ಟ ಸರ್ಕಾರ ನಾನು ನೋಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸರ್ಕಾರ ಹೋಗುವುದು ಉತ್ತಮ ಎಂದು ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ಒಂದು ವೇಳೆ ಕೊಟ್ಟಿದ್ದರೆ ದಾಖಲೆ ತೋರಿಸಲಿ. ನಾನು ಒಬ್ಬ ಶಾಸಕ, ಸರ್ಕಾರದಿಂದ ಅನುದಾನ ಪಡೆಯುವುದಕ್ಕೆ ಅರ್ಹ ಎಂದು ಹೇಳಿದರು.