ಧಾರವಾಡ/ಹುಬ್ಬಳ್ಳಿ: ಟಗರಿನ ಕಾಳಗದ ವೇಳೆ ನಡೆದ ಮಾರಾಮಾರಿಯಿಂದ ಮೂವರು ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.
ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ಜಾತ್ರಾಮಹೋತ್ಸವ ಹಾಗೂ ಮಕರ ಸಂಕ್ರಾಂತಿಯ ನಿಮಿತ್ತ ಶಾಸಕರ ಮಾದರಿ ಶಾಲಾ ಮೈದಾನದಲ್ಲಿ ಟಗರಿನ ಕಾಳಗದ ಸ್ಪರ್ಧೆ ಏರ್ಪಡಿಸಲಾಗಿತ್ತು. ದಾಸೋಹ ಮಠದ ಶಿವಕುಮಾರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಕ್ರೆಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
Advertisement
Advertisement
ತಾಲೂಕಿನ ವಿವಿಧ ಭಾಗಗಳಿಂದ ಟಗರು ಸಾಕಾಣಿಕೆದಾರರು ಟಗರು ತೆಗೆದುಕೊಂಡು ಬಂದಿದ್ದರು. ಈ ವೇಳೆ ಟಗರಿನ ಕಾಳಗಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಟಗರುಗಳ ಮಾಲೀಕರು ಕೇಕೆ ಹಾಕುತ್ತಿದ್ದರು. ಆಗ ನೋಡುಗರ ಮಧ್ಯೆಯೇ ಮಾತಿನ ಚಕಮಕಿ ಶುರುವಾಗಿ ನೂಕಾಟ, ತಳ್ಳಾಟಗಳೆಲ್ಲ ನಡೆದು ಪರಸ್ಪರ ಹೊಡೆದಾಡ ಶುರುವಾಗಿದೆ. ಪರಿಣಾಮ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರು ಬೆತ್ತದ ರುಚಿ ತೋರಿಸಿ ಗುಂಪನ್ನು ಚದುರಿಸಿದ ಪರಿಸ್ಥಿತಿ ಹತೋಟಿಗೆ ತಂದರು.
Advertisement
ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಗುಂಪು ಚದುರಿದ್ದಾರೆ. ಸದ್ಯ ಸ್ಥಳ ಶಾಂತವಾಗಿದೆ. ಘಟನೆಯ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement