– ಹಾಲು ಹಾಕಿದವನಿಂದಲೂ ಬಳ್ಳಾರಿಗೆ ಟೆನ್ಶನ್
ಬಳ್ಳಾರಿ: ದಿನದಿಂದ ದಿನಕ್ಕೆ ಜಿಂದಾಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯನ್ನು ಮೀರಿಸಿರುವ ಜಿಂದಾಲ್ನಲ್ಲಿ ಕೊರೊನಾ ಶತಕ ಬಾರಿಸಿದೆ.
ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಂದಾಲ್ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಬಳ್ಳಾರಿ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಮುಂದುವರಿದಿದೆ. ಶನಿವಾರ ಬಳ್ಳಾರಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ 8 ಪ್ರಕರಣ ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 181 ಸೋಂಕಿತರಲ್ಲಿ ಸಿಂಹಪಾಲು ಅಂದರೆ 103 ಪ್ರಕರಣ ಜಿಂದಾಲ್ಗೆ ಸೇರಿದೆ. ಅಂದರೆ ಜಿಂದಾಲ್ ಒಂದೇ ಶತಕ ಬಾರಿಸಿ ಮುಂದುವರಿಯುತ್ತಿದೆ.
Advertisement
Advertisement
ಪ್ರತಿದಿನ 120 ಮನೆಗೆ ಹಾಲು ಸರಬರಾಜು ಮಾಡ್ತಿದ್ದ
ಜಿಂದಾಲ್ ನೌಕರರ ವಸತಿ ಸಮುಚ್ಚಯ ಇರುವ ವಿವಿ ನಗರ, ವಿದ್ಯಾನಗರ, ಶಂಕರಗುಡ್ಡ ಕಾಲೋನಿಗಳಿಗೆ ನಿತ್ಯ ಹಾಲು ಹಾಕುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ 45 ವರ್ಷದ ವ್ಯಕ್ತಿ ನಿತ್ಯ ಜಿಂದಾಲ್ ನೌಕರರ ಸುಮಾರು 120 ಮನೆಗಳಿಗೆ ಹಾಲು ಹಾಕುತ್ತಿದ್ದ. ಬೈಕ್ ಮೇಲೆ ತಿಮ್ಮಲಾಪುರದಿಂದ ಜಿಂದಾಲ್ಗೆ ಹೋಗಿ ಬರುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ಈತನ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಜ್ವರ ಹಾಗೂ ಗಂಟಲುನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ತಪಾಸಣೆ ಮಾಡಿಸಿ, ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಬಳಿಕ ಸೋಂಕು ಇರುವುದು ಖಚಿತವಾಗಿದೆ.
Advertisement
Advertisement
ಹಾಲು ಹಾಕುತ್ತಿದ್ದ ವ್ಯಕ್ತಿಗೆ ಸೋಂಕು ದೃಢವಾಗ್ತಿದ್ದಂತೆ ನಗರದ ಜಿಲ್ಲಾ ಕೊರೊನಾ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿದೆ. ಈತ ವಾಸವಾಗಿರುವ ತಿಮ್ಮಲಾಪುರ ಗ್ರಾಮದ ನಿವಾಸ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗಿದೆ. ಇನ್ನೂ ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದ್ದು, ಗ್ರಾಮದ ಕೆಲ ರಸ್ತೆಗಳನ್ನು ಬಂದ್ ಮಾಡಿ, ಗ್ರಾಮದ ಜನರು ಜಿಂದಾಲ್ ನೌಕರರು ಪ್ರವೇಶವನ್ನು ನಿಷೇಧಿಸಿದ್ದಾರೆ.
ಜಿಂದಾಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಜಿಂದಾಲ್ ಮಾತ್ರ ತಮ್ಮ 10 ಸಾವಿರ ನೌಕರರನ್ನು ಕೇವಲ ನಾಲ್ಕು ದಿನಗಳ ಕಾಲ ಕ್ವಾರೆಂಟೈನ್ ಮಾಡಿ ಮತ್ತೆ ಎಡವಟ್ಟು ಮಾಡಿಕೊಂಡಿದೆ. ಜಿಲ್ಲಾಡಳಿತ ಹಾಗೂ ಜಿಂದಾಲ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವುದು ಎಂದು ಸ್ಥಳೀಯರು ಆತಂಕ ಪಡುತ್ತಿದ್ದಾರೆ.