ಶಿವಮೊಗ್ಗ: ಕೋವಿಡ್ 19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಶಿವಮೊಗ್ಗ-ಬೆಂಗಳೂರು ನಡುವಣ ಜನಶತಾಬ್ದಿ ರೈಲು ಸಂಚಾರ ಜೂನ್ 1ರಿಂದ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದರು.
ಶಿವಮೊಗ್ಗ ರೈಲ್ವೇ ನಿಲ್ದಾಣಕ್ಕೆ ಇಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯ ಕೇವಲ ಒಂದು ರೈಲು ಮಾತ್ರ ಸೇವೆ ಆರಂಭಿಸಲಿದೆ. ಜೂನ್ 1ರಂದು ಸಂಜೆ 5.30ಕ್ಕೆ ಬೆಂಗಳೂರಿನಿಂದ ಹಾಗೂ ಜೂನ್ 2ರಂದು ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿದೆ. ಕೇವಲ ಆನ್ಲೈನ್ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶವಿದೆ. ಪ್ರತಿ ಬೋಗಿಯಲ್ಲಿ ಕೇವಲ 54 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದ್ದು, ಒಟ್ಟು 648 ಸೀಟುಗಳನ್ನು ಮಾತ್ರ ಕಾಯ್ದಿರಿಸಲಾಗುತ್ತಿದೆ. ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
Advertisement
Advertisement
ರೈಲಿನ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶಿವಮೊಗ್ಗ-ಭದ್ರಾವತಿ-ಕಡೂರು-ತುಮಕೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಹತ್ತುವುದಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ರೋಗ ಲಕ್ಷಣವಿರುವವರಿಗೆ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಜಿಲ್ಲಾಡಳಿತದ ವತಿಯಿಂದ ಸಹ ಸ್ಕ್ರೀನಿಂಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದರು.
Advertisement
Advertisement
ಇನ್ನು ಕೋವಿಡ್ ಸಂದರ್ಭದಲ್ಲಿ ದೂರದ ಪ್ರಯಾಣ ಒಳ್ಳೆಯದಲ್ಲ. ರೈಲಿನಲ್ಲಿ ಅನಿವಾರ್ಯವಾದರೆ ಮಾತ್ರ ಪ್ರಯಾಣಿಸುವುದು ಉತ್ತಮ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.