ಬೆಂಗಳೂರು: ಇದೇ ತಿಂಗಳ 20ರ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಲಾಕ್ಡೌನ್ ಮಾಡುವ ಮೊದಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಳೆದ ಮಾರ್ಚ್ನಲ್ಲಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಲಾಕ್ಡೌನ್ ಸಡಿಲಿಕೆಯಾದ ನಂತರ ಜೂನ್ 18 ರಂದು ಇಂಗ್ಲೀಷ್ ಪರೀಕ್ಷೆ ಮಾಡಲಾಗಿತ್ತು.
Advertisement
Advertisement
ಇದೀಗ ವಿದ್ಯಾರ್ಥಿಗಳು, ಪೋಷಕರು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಹೀಗಾಗಿ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, “ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ” ಎಂದು ಟ್ವಿಟ್ಟರಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3 ಲಕ್ಷದ 38 ಸಾವಿರದ 431 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 41 ಸಾವಿರದ 618 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ರಾಜ್ಯಾದ್ಯಂತ 1016 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಇಂಗ್ಲೀಷ್ ಪರೀಕ್ಷೆಗೆ ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಗೈರಾಗಿದ್ದರು. ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 5,68,975 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಅಧಿಕೃತ ಮಾಹಿತಿ ನೀಡಿತ್ತು.